ಬಿ ಬಿ ಎಂ ಪಿ ಚುನಾವಣೆ ಮತ್ತು ಮಹಿಳಾ ಮೀಸಲಾತಿ !!

ಆಗಸ್ಟ್ ತಿಂಗಳ ಒಂದು ದಿನ. ಕಾಲೇಜ್ ನಿಂದ ಮನೆಗೆ ಬಂದು ಪೇಪರ್ ಓದುತ್ತಾ ಕುಳಿತಿದ್ದೆ . ಮನೆಯ ಹಿಂಭಾಗದ ರಸ್ತೆಯಲ್ಲಿ ಆಟೋ ದಲ್ಲಿ ಬಿ ಬಿ ಎಂ ಪಿ ಚುನಾವಣೆಯ ಪ್ರಚಾರ ಮಾಡುತ್ತಿರುವುದು ಕೇಳಿಸಿತು . ಸುಮ್ಮನೆ ಕಿವಿಗೊಟ್ಟೆ …  “ಜನಾನುರಾಗಿ , ಜನಪರ ವ್ಯಕ್ತಿ, ಬಡವರ ಬಂಧು, ದೀನ ದಲಿತರ ಆಶಾ ಕಿರಣ, ನಮ್ಮ ನಿಮ್ಮೆಲ್ಲರ ನೆಚ್ಚಿನ ಸ್ನೇಹಿತ ಕೆ. ಎಮ್. ಮಂಜು ..” ಇಷ್ಟು ಹೇಳುತ್ತಿದ್ದಂತೆ ನನ್ನ ತಲೆ ಕೆಲಸ ಮಾಡಿತು – ಈ ಬಾರಿ ನಮ್ಮ ವಾರ್ಡ್ ಲೇಡೀಸ್ reservation ಅಂತ ಓದಿದ ನೆನಪಲ್ಲವೇ ಎಂದು. ಅಷ್ಟರಲ್ಲಿ ಅವರ ವಾಕ್ಯ ಮುಂದುವರೆಯಿತು – “.. ಕೆ ಎಂ ಮಂಜು ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಎಂ ಮಂಜು ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಭಾರೀ ಅಂತರದಿಂದ ಗೆಲ್ಲಿಸಿ” !!  ದಂಗಾದೆ !!  ಇಷ್ಟು ಹೊತ್ತೂ ಹೇಳಿದ ವಿಶೇಷಣಗಳು ಅಭ್ಯರ್ಥಿಯ  ಗಂಡನಿಗೆ !!

ಮರುದಿನ ವೃತ್ತ ಪತ್ರಿಕೆ ಯ ಜೊತೆ ಕರಪತ್ರಗಳು – ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬಗ್ಗೆ. ಎರಡೂ ಕರಪತ್ರಗಳಲ್ಲಿ ಮಾಮೂಲಿನಂತೆ ಪಕ್ಷದ ಹಿರಿತಲೆಗಳ ಭಾವಚಿತ್ರಗಳು (ಸೋನಿಯಾ ಗಾಂಧಿಯಿಂದ ಮುನಿರತ್ನ ತನಕ, ಮೋದಿಯಿಂದ ಹಿಡಿದು ರಾಮಚಂದ್ರಪ್ಪ ತನಕ!!) ಮೇಲ್ಭಾಗದಲ್ಲಿ . ಆದರೆ  ಅಭ್ಯರ್ಥಿಯ ಫೋಟೋ ಇರಬೇಕಾದ ಕಡೆ ಅವರ ಗಂಡಂದಿರ ಫೊಟೋ ಮತ್ತು ಗಂಡನ ಭುಜದ ಹಿಂಬದಿಗೆ ತಾಕಿದಂತೆ  ಆ ಬಡಪಾಯಿ ಅಭ್ಯರ್ಥಿಯ ಫೋಟೋ !!

ಎರಡು ದಿನ ಆದ ಮೇಲೆ  Election Commission ಕೊಟ್ಟ ಸೂಚನೆಯಂತೆ ಬಹಿರಂಗ ಪ್ರಚಾರದ ಕೊನೆಯ ದಿನವೂ ಕಳೆದ ನಂತರ ರಾತ್ರಿ ಎಂಟು ಘಂಟೆ ಸುಮಾರಿಗೆ ನಮ್ಮ ಏರಿಯಾ ದ ಪ್ರಭಾವಿ ವ್ಯಕ್ತಿಗಳ ಪತ್ನಿಯರ ಗುಂಪು “ನಳಿನಿ ಎಂ ಮಂಜು ” ಅವರ ಜೊತೆ ನಮ್ಮ ಅಪಾರ್ಟ್ ಮೆಂಟ್ ಗೆ ಬಂದರು, ವೋಟು ಕೇಳಲು. ಮಾತೆಲ್ಲ ಆಡಿದ್ದು ಉಳಿದವರೇ . ಕೈ ಮುಗಿದು ಹ್ಯಾಪು ಮೋರೆ ಹಾಕಿ ನಿಂತಿದ್ದ ಅಭ್ಯರ್ಥಿ ಬಾಯೇ ಬಿಡಲಿಲ್ಲ . ಅಯ್ಯೋ ಎನಿಸಿತು.

ಸರಿ, ಎಲೆಕ್ಷನ್ ಮುಗಿದು ರಿಸಲ್ಟ್ ಬನ್ತು. ನಮ್ಮ  “ಜನಾನುರಾಗಿ , ಜನಪರ ವ್ಯಕ್ತಿ, ಬಡವರ ಬಂಧು, ದೀನ ದಲಿತರ ಆಶಾ ಕಿರಣ, ನಮ್ಮ ನಿಮ್ಮೆಲ್ಲರ ನೆಚ್ಚಿನ ಸ್ನೇಹಿತ ಕೆ. ಎಮ್. ಮಂಜು  ಅವರ ಧರ್ಮಪತ್ನಿ ಶ್ರೀಮತಿ ನಳಿನಿ ಎಂ ಮಂಜು ” ಗೆದ್ದರು 😀

ಮರುದಿನ ರಸ್ತೆಗಳ ಅಕ್ಕಪಕ್ಕದಲ್ಲಿ hoardings “ಅಮೂಲ್ಯ ಮತ” ನೀಡಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಹೇಳಲು . ಯಥಾ ಪ್ರಕಾರ ಮುಂದೆ ಹಲ್ಕಿರಿಯುತ್ತಿರುವ ಗಂಡ, ಆತನ ಹಿಂದೆ ಭುಜಕ್ಕೆ ತಾಕಿದಂತೆ photoshop ಮಾಡಿದ ಹ್ಯಾಪು ಮೋರೆಯ ನಮ್ಮ ಕಾರ್ಪೊರೇಟರ್ !!  ಮತ್ತೆ ಒಂದಿಷ್ಟು ಕಡೆ ದೊಡ್ಡ ಹಾರ (ಇಬ್ಬರೂ ಸೇರಿ) ಹಾಕಿಸಿಕೊಂಡ ಫೋಟೋಗಳು.

ಇದು ಬರೀ ನಮ್ಮ ವಾರ್ಡ್ ಕಥೆ ಅಲ್ಲ. ಇಡೀ ಬೆಂಗಳೂರು ಪೂರ್ತಿ ಇಂಥವೇ. ಯಾರಿಗೆ ಬಂತು ಎಲ್ಲಿಗೆ ಬಂತು ಮಹಿಳಾ ಮೀಸಲಾತಿ? ಗಂಡ ಅನ್ನುವ ವ್ಯಕ್ತಿ ಇಲ್ಲದಿದ್ದರೆ ಹೆಣ್ಣಿನ ಜೀವನ ಜೀವನವೇ ಅಲ್ಲ ಎನ್ನುವ ಕಾಲದಿಂದ ನಾವು ಹೊರಗೆ ಬಂದೇ  ಇಲ್ಲ ಅನ್ನಿಸಿತು . ನನ್ನ ಪ್ರಶ್ನೆ ಇಷ್ಟೇ, ಅಕಸ್ಮಾತ್ ಒಬ್ಬ ಗಂಡಸು ಅಭ್ಯರ್ಥಿ ಆಗಿದ್ದರೆ ಆತನ ಕರಪತ್ರದಲ್ಲಿ ಅವನ ಹೆಂಡತಿಯ ಹೆಸರಾಗಲೀ ಫೋಟೋ ಆಗಲೇ ಇರುತ್ತಿತ್ತೆ? ಆತ ಗೆದ್ದರೆ ಹೆಂಡತಿ ಜೊತೆಗೆ ಹಾರ ಹಾಕಿಸಿಕೊಂಡು ಫೋಟೋ ತೆಗೆಸಿ hoarding ಹಾಕುತ್ತಿದ್ದರೇ ? ಅರ್ಹತೆ ಇರುವ ಮಹಿಳಾ ಅಭ್ಯರ್ಥಿಗಳ ಬದಲು ಲೋಕಲ್ ಲೀಡರ್ ಹೆಂಡತಿಗೆ ಟಿಕೆಟ್ ಕೊಟ್ಟು ಈ ಪಕ್ಷಗಳು ಸಾಧಿಸುವುದಾದರೂ ಏನನ್ನು? ದಿನಪತ್ರಿಕೆಗಳು ಮಾಡಿದ ಸಮೀಕ್ಷೆಯಂತೆ ಕಾರ್ಪೊರೇಟರ್ ಗೆ ಫೋನ್ ಮಾಡಿದರೆ ಆಕೆಯ ಗಂಡ ಮಾತಾಡುವುದಾದರೆ ಈ “ಮೀಸಲಾತಿ” ಅನ್ನೋ ಸೋಗು ಯಾಕೆ ಬೇಕು?

ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತಿದೆ .

This entry was posted in ಭಾವಲೋಕ...!!!. Bookmark the permalink.

Leave a Reply

Your email address will not be published. Required fields are marked *