“ವಿವಿಧತೆಯಲ್ಲಿ ಏಕತೆ” ಸಾಕ್ಷಾತ್ಕಾರವಾದ ಕ್ಷಣಗಳು !!

ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲಾ ಅಭ್ಯಾಸದ ದಿನಗಳಲ್ಲಿ ಬಹಳಷ್ಟು ಬಾರಿ ಕೇಳಿದ ವಾಕ್ಯಗಳು – “ನಮ್ಮ ದೇಶ ಭಾರತ ಇಪ್ಪತ್ನಾಲ್ಕು (1990ರ ಸಮಯ) ರಾಜ್ಯಗಳನ್ನು ಹೊಂದಿದೆ. ವಿವಿಧ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳನ್ನು ಒಳಗೊಂಡಂತಹ ದೇಶ. ಈ ಮೂಲಕವಾಗಿ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ದೇಶ”.  ಇಂಥ ವಾಕ್ಯಗಳನ್ನು ಅದೆಷ್ಟೋ ಬಾರಿ ಶಾಲಾ ಭಾಷಣಗಳಲ್ಲಿಯೋ, ಪ್ರಬಂಧ ಸ್ಪರ್ಧೆಗಳಲ್ಲಿಯೋ ಬಳಸಿಯಾಗಿತ್ತು. ನಮ್ಮ ದೇಶದಲ್ಲಿ ಎಷ್ಟೆಲ್ಲ ಭಾಷೆಗಳಿವೆ, ಒಂದೇ ಭಾಷೆಯಲ್ಲಿ ಎಷ್ಟೆಲ್ಲಾ ಉಪ-ಭಾಷೆಗಳಿವೆ, ಆಚಾರ – ವಿಚಾರ ಬೇರೆ ಬೇರೆ ಎಂಬುದು ನಮಗೆಲ್ಲ ಗೊತ್ತು. ಹಾಗೆ ನೋಡಿದರೆ ಒಂದೇ ರಾಜ್ಯದಲ್ಲಿ – ಕರ್ನಾಟಕವನ್ನೇ ಉದಾಹರಣೆಗೆ ತೆಗೆದುಕೊಂಡರೂ ನೂರು ಕಿಲೋಮೀಟರ್ ದೂರ ಕ್ರಮಿಸಿದರೆ ಭಾಷೆಯ ಧಾಟಿಯಲ್ಲಿ (accent) ಬದಲಾವಣೆ ಆಗುವುದನ್ನು ಗಮನಿಸಬಹುದು.

ಇಷ್ಟೆಲ್ಲ ಗೊತ್ತಿದ್ದರೂ ನನಗೆ ಇದು ಮಹಾ ವಿಶೇಷದ ಸಂಗತಿ ಎಂದು ಯಾವತ್ತೂ ಅನಿಸಿರಲಿಲ್ಲ. ಸಿಂಗಾಪುರ್, ಮಲೇಷಿಯಾ, ಇಂಡೋನೇಷಿಯಾ ದೇಶಗಳಿಗೆ ಹೋದರೂ ನಮ್ಮ ದೇಶ ಈ ಎಲ್ಲ ದೇಶಗಳಿಂತ ನಿಜಕ್ಕೂ ಭಿನ್ನವಾಗಿದೆ ಎಂದು ಅನಿಸಿರಲಿಲ್ಲ. ಆಯಾ ದೇಶದ ಜನರ ಜೊತೆ ಹೆಚ್ಚಾಗಿ ಒಡನಾಡುವಷ್ಟು ಸಮಯ ಇರದೇ ಇದ್ದುದಕ್ಕೆ ನನಗೆ ಹಾಗೆ ಅನ್ನಿಸಿರಬಹುದು. ಆದರೆ ಕೆಲವು ತಿಂಗಳ ಹಿಂದೆ ಶ್ರೀಲಂಕಾಗೆ ಹೋದಾಗ ಪರಿಚಯವಾದ ಫಿಲಿಫೈನ್ಸ್ ದೇಶದ ಒಬ್ಬ ಮಹಿಳೆಯಿಂದಾಗಿ ನನಗೆ ಜ್ಞಾನೋದಯವಾಯಿತು !!

IEEE SYW (Student, Young Professional, Women) Congress  ಎಂಬ ನಾಲ್ಕು ದಿನಗಳ ಕಾರ್ಯಾಗಾರಕ್ಕೆ ಆಹ್ವಾನಿತಳಾಗಿ ಕೊಲಂಬೊಗೆ ಹೋಗಿದ್ದೆ. ಏಶಿಯಾ-ಪೆಸಿಫಿಕ್ ವಿಭಾಗದ 15ಕ್ಕೂ  ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ ಕಾರ್ಯಕ್ರಮವದು. ಭಾರತದಿಂದ ಸುಮಾರು 25-30 ಜನರಿದ್ದರು. ಮೊದಲನೇ ದಿನವೇ ಫಿಲಿಫೈನ್ಸ್ ದೇಶದ ಜೆನ್ನಿಫರ್ ಎಂಬ ಮಹಿಳೆಯು ನಾವು ಕುಳಿತಿದ್ದ ದುಂಡು-ಮೇಜಿನ ಬಳಿ ಬಂದು ಕುಳಿತಳು. ಪರಸ್ಪರ ಪರಿಚಯವೆಲ್ಲ ಆಯಿತು. ಫಿಲಿಫೈನ್ಸ್ ನಿಂದ ಬಂದವರು ಬೇರೆ ಯಾರೂ ಇಲ್ಲದ ಕಾರಣ ಆಕೆ ನಮ್ಮ ಜೊತೆಯೇ ಉಳಿದ ಮೂರೂ ದಿನ ಇದ್ದಳು. ಮೊದಲ ದಿನ ಆಕೆ ತುಂಬ ಗಾಭರಿ – ಭಯದಲ್ಲಿ ಇದ್ದಳು. ಹೋಟೆಲ್ ನಿಂದ ಕೇವಲ ಅರ್ಧ ಕಿಲೋಮೀಟರ್ ದೂರವಿದ್ದ ದೇವಸ್ಥಾನವೊಂದನ್ನು (ಬುದ್ಧ ಸ್ತೂಪ) ತೋರಿಸುವೆನೆಂದು ಕರೆದುಕೊಂಡು ಹೋದ ಆಟೋ ಡ್ರೈವರ್ ಒಬ್ಬ ಅವಳಿಂದ ಎರಡೂವರೆ ಸಾವಿರ (ಶ್ರೀಲಂಕಾದ ರುಪೀ) ಕಿತ್ತಿದ್ದ. ಈ ವಿಷಯವನ್ನು ಅವಳು ತುಂಬ ಬೇಸರ, ಜಿಗುಪ್ಸೆಯಿಂದ ಹೇಳಿ ಶ್ರೀಲಂಕಾದಂತಹ ಕೆಟ್ಟ ದೇಶಕ್ಕೆ ತಾನು ಇನ್ನೆಂದೂ ಬರುವುದಿಲ್ಲ ಎಂದಳು. ತಕ್ಷಣ ನಾನು “ಎಲ್ಲರೂ ಹಾಗೆ ಇರುವುದಿಲ್ಲ, ಯಾರೋ ಒಬ್ಬ ಹಾಗೆ ಮಾಡಿರಬಹುದು ಅಷ್ಟೇ. ನಾವೂ ಕಳೆದ ಮೂರು ದಿನಗಳಿಂದ ತುಂಬ ಪ್ರವಾಸೀ ತಾಣಗಳನ್ನು ನೋಡಿ ಬಂದಿದ್ದೇವೆ, ಹಾಗೇನೂ ಆಗಲಿಲ್ಲ” ಎಂದು ಶ್ರೀಲಂಕಾ ಪರವಾಗಿ ಮಾತನಾಡಿದೆ. ಆಮೇಲೆ ನಾನೇ ಯೋಚಿಸಿದೆ “ನಾನ್ಯಾಕೆ ಶ್ರೀಲಂಕಾ ದೇಶದ ಘನತೆ ಕಾಪಾಡುವ ಪ್ರಯತ್ನ ಮಾಡಿದೆ?” ಎಂದು. ಶ್ರೀಲಂಕಾದ ಯಾವುದೇ ಊರಿಗೆ ಹೋದರೂ ಬೇರೆ ದೇಶದಲ್ಲಿ ಇದ್ದೇನೆ ಎಂದು ಅನ್ನಿಸಿಯೇ ಇರಲಿಲ್ಲ, ನಮ್ಮ ದೇಶದಂತೆಯೇ ಭಾಸವಾಗಿತ್ತು ಎಂಬುದು ಒಂದು ಕಾರಣ. ಅದಕ್ಕಿಂತ ಮಿಗಿಲಾಗಿ ಚಿಕ್ಕಂದಿನಲ್ಲಿ ಶಾಲೆಯಲ್ಲಿ “ಭಾರತದ ನಕ್ಷೆ ಬಿಡಿಸಿ ನಗರಗಳನ್ನು ಗುರುತಿಸಿ” ಎಂಬ ಪ್ರಶ್ನೆಗೆ ಉತ್ತರಿಸುವಾಗ ಭಾರತದ ನಕ್ಷೆಯ ಕೆಳಗಡೆ ಕಡ್ಡಾಯವಾಗಿ ಶ್ರೀಲಂಕಾವನ್ನು ಬಾಲದಂತೆ ಬಿಡಿಸೀ ಬಿಡಿಸೀ ಅದು ಬೇರೆ ದೇಶ ಎನ್ನುವ ವಾಸ್ತವವೇ ಮರೆಯಾಗಿ ಹೋಗಿತ್ತು ಎಂಬುದು ನಿಜವಾದ ಕಾರಣವಾಗಿರಬಹುದು!! 😀

ಸರಿ, ಎರಡನೇ ದಿನದ ಹೊತ್ತಿಗೆ ತಿಂಡಿ, ಊಟ, ಟೀ-ಬ್ರೇಕ್ ಎಲ್ಲ ಸಮಯದಲ್ಲೂ ಜೆನ್ನಿಫರ್ ನಮ್ಮ ಜೊತೆಯಾಗಲು ಶುರುಮಾಡಿದಳು. ಅಲ್ಲೇ ಆದದ್ದು ಎಡವಟ್ಟು !!  ಆಕೆ ನಮ್ಮನ್ನು ತುಂಬ ಹತ್ತಿರದಿಂದ ಗಮನಿಸುತ್ತಿದ್ದಾಳೆ ಎಂಬುದು ನನಗೆ ಗೊತ್ತಾಗುವಾಗ ಕಾಲ ಮಿಂಚಿತ್ತು !!   ಬರೀ ಗಮನಿಸಿದ್ದರೆ ತೊಂದರೆ ಇರಲಿಲ್ಲ. ಅಷ್ಟರಲ್ಲಾಗಿಯೇ ಬೆಳೆದಿದ್ದ ಆತ್ಮೀಯತೆಯಿಂದ ಆಕೆ ಪ್ರಶ್ನೆಗಳನ್ನು ಕೇಳತೊಡಗಿದಳು. ಊಟ/ತಿಂಡಿ ಬಡಿಸಿಕೊಳ್ಳುವಾಗ ನಾನು “veg or nonveg” ಎಂದು ಪ್ರಶ್ನಿಸುತ್ತಿದ್ದೆ. (ಅಲ್ಲಿ ಕೆಂಪು/ಹಸಿರು ಚುಕ್ಕಿಗಳ ಬೋರ್ಡ್ ಇರದ ಕಾರಣ veg ಯಾವುದು, nonveg ಯಾವುದು ಎಂದು ಗೊತ್ತಾಗುತ್ತಿರಲಿಲ್ಲ). ಆಕೆ ಕೇಳಿದಳು, “ನೀನು ಯಾಕೆ nonveg ತಿನ್ನುವುದಿಲ್ಲ?” ಎಂದು.  “ನಾನು ಬ್ರಾಹ್ಮಣ ಎಂಬ ಜಾತಿಗೆ ಸೇರಿದವಳು, ಹಾಗಾಗಿ ತಿನ್ನಲ್ಲ” ಎಂದು ಹೇಳಲಾ ಅಂತ ಅನ್ನಿಸುವಷ್ಟರಲ್ಲಿ ನನ್ನ ಜೊತೆಗಿರುವ ದೀಪಾ ಮೇಡಂ ಗೌಡ ಸಾರಸ್ವತ ಬ್ರಾಹ್ಮಣರು, ಆದರೆ nonveg ತಿನ್ನುತ್ತಾರಲ್ಲ ಎಂದು ನೆನಪಾಯಿತು.  ಹಾಗಾಗಿ, “ನನ್ನ ಜಾತಿಯಲ್ಲಿ ಯಾರೂ ತಿನ್ನಲ್ಲ” ಎಂದು ಹೇಳಿ ಸುಮ್ಮನಾದೆ. ಆದರೆ ನನ್ನ ಉತ್ತರ ನನಗೇ ಸಮಾಧಾನ ತರಲಿಲ್ಲ. ಏಕೆಂದರೆ ನನ್ನದೇ ಎಷ್ಟೋ ಸಂಬಂಧಿಕರು ಮನೆಯಲ್ಲೇ nonveg ತಿನ್ನುವುದು ನನಗೆ ಗೊತ್ತಿರುವ ವಿಚಾರವೇ!!

ಅಷ್ಟರಲ್ಲಿ ಆಕೆ ಕೇಳಿದಳು “ಮತ್ತೆ ಹಾಲು ಹಾಕಿದ ಟೀ ಕುಡಿಯುತ್ತೀಯಾ? ಮೊಸರು ತಿನ್ನುತ್ತೀಯಾ?” ಎಂದು. ಆದರೆ ಜಾಸ್ತಿ ತಲೆಕೆಡಿಸಿಕೊಳ್ಳದೇ “ಅವೆಲ್ಲ  allowed” ಎಂದುಬಿಟ್ಟೆ. “ಮತ್ತೆ ಮೊಟ್ಟೆ ಯಾಕೆ ತಿನ್ನಲ್ಲ?” ಎಂದಳು.  ನಾನು ಕಂಗಾಲಾದೆ. ಈ ಪರದೇಶಿಗಳು (ಪರ ದೇಶದವರು !!)  vegetarian  ಹಾಗೂ vegan ಎಂಬುದನ್ನು ಶಬ್ದಶಃ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ಹೊಳೆಯಿತು.  “ಅಯ್ಯೋ ಬಿಟ್ಬಿಡು ತಾಯೀ” ಅನ್ನೋಣ ಅನ್ನಿಸಿತು. ಹೇಗೋ ಮಾತು ಬದಲಾಯಿಸಿ ಬಚಾವಾದೆ. ಆದರೆ ಸ್ವತಃ ನನಗೆ ಗೊಂದಲ ಶುರುವಾಗಿದ್ದು ಸುಳ್ಳಲ್ಲ.

jennifer

ದೀಪಾ ಮೇಡಂ ಮತ್ತು ಜೆನ್ನಿಫರ್ ಜೊತೆಗೆ ನಾನು

ಮತ್ತೆ ಮುಂದಿನ ಟೀ-ಬ್ರೇಕ್ ನಲ್ಲಿ ಜೆನ್ನಿಫರ್ ಳ ಪ್ರಶ್ನೆಗಳು ಶುರುವಾದವು. ಆದರೆ ಈಗ ವರಸೆ ಬದಲಾಗಿತ್ತು. “ನೀನು ಹಣೆಯಲ್ಲಿ ಇಟ್ಟಿರುವುದು ಏನು? ಯಾಕೆ ಇಟ್ಟಿದ್ದೀಯಾ?” ಪ್ರಶ್ನೆ ತೂರಿಬಂತು.  “ಅದಕ್ಕೆ ಕುಂಕುಮ/ಬಿಂದಿ ಅಂತಾರೆ. ನಮ್ಮ ದೇಶದಲ್ಲಿ ಎಲ್ಲಾ ಹಿಂದೂ ಹೆಣ್ಣುಮಕ್ಕಳು ಇಡುತ್ತಾರೆ” ಎಂದೆ.  ತಕ್ಷಣ ನನಗೇ ಅನ್ನಿಸಿತು, ಇತ್ತೀಚಿಗೆ ಎಲ್ಲರೂ ಕುಂಕುಮ ಇಡಲ್ವಲ್ಲ ಎಂದು. ಆದರೆ ಪುಣ್ಯಕ್ಕೆ ಅದು ಅವಳಿಗೆ ಗೊತ್ತಿಲ್ಲ!!  ಆದರೆ ಅವಳು ಬೇರೆ ಪ್ರಶ್ನೆ ಹಾಕಿದಳು “ಮತ್ತೆ ನೀನು ಯಾಕೆ ಉದ್ದಕ್ಕೆ ಇಟ್ಟಿದ್ದೀಯಾ? ದೀಪಾ ಮೇಡಂ ದೊಡ್ಡದಾಗಿ round ಆಗಿ ಇಟ್ಟಿದ್ದಾರೆ. ವಿಜಯಲತಾ ಬೇರೆ ಯಾವುದೋ design, ಪ್ರೀತಿ, ರಾಮಲತಾ ಎಲ್ಲರೂ ಬೇರೆ-ಬೇರೆ ಥರ ಇಟ್ಟಿದ್ದಾರೆ ಯಾಕೆ?”  “ಅವರವರ dress ಗೆ ಅನುಗುಣವಾಗಿ ಅವರವರ ಇಷ್ಟದ ಪ್ರಕಾರ ಇಡ್ತಾರೆ ಅಷ್ಟೇ” ಎಂದೆ.  “ಹಿಂದೂ ಧರ್ಮದ ಪ್ರಕಾರ ಕುಂಕುಮ ಇಡೋದಾದರೆ ಎಲ್ಲವೂ ಒಂದೇ ಥರ ಇರಬೇಕಲ್ಲವೇ?” ಎಂದು ಧರ್ಮದ ಮೂಲಕ್ಕೇ ಕೈ ಹಾಕಿದಳು!  “ಹಿಂದೂ ಎನ್ನುವುದು ಒಬ್ಬ ಪ್ರವಾದಿಯಿಂದ ಶುರುವಾದ ಒಂದಿಷ್ಟು ರೀತಿ-ನಿಯಮಗಳ ಪಟ್ಟಿ ಇರುವಂತಹ ಧರ್ಮವಲ್ಲ. ಅದು ಒಂದು ‘ಬದುಕುವ ರೀತಿ (way of life)’. ಹಾಗಾಗಿ ಇಲ್ಲಿ ಪ್ರತಿಯೊಬ್ಬರಿಗೂ ತಮಗೆ ಬೇಕಾದಂತೆ ಬದುಕುವ ಸ್ವಾತಂತ್ರ್ಯವಿದೆ” ಎಂದು ಕೊಂಚ ಹೆಮ್ಮೆಯಿಂದಲೇ ಹಿಂದೂ ಧರ್ಮದ ಬಗ್ಗೆ ಪುಟ್ಟ ಭಾಷಣ ಬಿಗಿದೆ!!

ಅಷ್ಟರಲ್ಲಿ ನನ್ನ ಕತ್ತಿನಲ್ಲಿದ್ದ ಮಾಂಗಲ್ಯದ ಸರ ಅವಳಿಗೆ ಕಾಣಿಸಿತು.  “ಹೀಗೆ ಕೇಳುತ್ತಿರುವುದಕ್ಕೆ ತಪ್ಪು ತಿಳಿಯಬೇಡ, ಕಳೆದ ಎರಡು ದಿನಗಳಿಂದಲೂ ಇದೇ necklace ಯಾಕೆ ಹಾಕುತ್ತಿದ್ದೀಯಾ?” ಎಂದಳು.  “ಇದು necklace ಅಲ್ಲ, ಮಾಂಗಲ್ಯ ಅಂತಾರೆ. ಮದುವೆಯಾದ ಎಲ್ಲ ಹಿಂದೂ ಹೆಂಗಸರು ಹಾಕುತ್ತಾರೆ” ಎಂದೆ.  “ಹಾಗಿದ್ರೆ ನಿನ್ನದು, ವಿಜಯಲತಾ, ರಾಮಲತಾ ಎಲ್ಲರ ಮಾಂಗಲ್ಯ ಏಕೆ ಬೇರೆ ಬೇರೆ ಥರ ಇದೆ?” ಪ್ರಶ್ನಿಸಿದಳು.  “ಹಿಂದೂ ಧರ್ಮದಲ್ಲಿ ಬೇರೆ ಬೇರೆ ಜಾತಿಗಳಿವೆ, ಬೇರೆ ಬೇರೆ ಪದ್ಧತಿಗಳಿವೆ. ಅವರವರ ಪದ್ಧತಿ ಪ್ರಕಾರ ಮಾಂಗಲ್ಯ ಹಾಕುತ್ತಾರೆ” ಎಂದು ಹೇಳಿ, ಮತ್ತೆ ಹಿಂದೂ ಧರ್ಮದಲ್ಲಿರುವ ಸ್ವಾತಂತ್ರ್ಯದ ಬಗ್ಗೆ ಹೇಳಿ ಬಚಾವಾದೆ.

“ಮತ್ತೆ ಅವರು ಯಾಕೆ ಹಾಕಿಲ್ಲ?”  ಎಂದು ಒಬ್ಬರ ಬಗ್ಗೆ ಪ್ರಶ್ನಿಸಿದಳು. ಈಗ ನಾನು ಗಾಭರಿಯಾದೆ. “ಅವರ ಗಂಡ ತೀರಿ ಹೋಗಿದ್ದಾರೆ” ಎಂಬ ಉತ್ತರ ತಕ್ಷಣ ನನ್ನ ಮನಸ್ಸಿಗೆ ಬಂದರೂ ಕೂಡ ಇತ್ತೀಚೆಗೆ ಎಷ್ಟೋ ಜನ ಗಂಡ ಇರುವವರೂ ಮಾಂಗಲ್ಯ ಹಾಕಲ್ಲ ಎಂಬ ಸತ್ಯ ನನ್ನನ್ನು ಅಣಕಿಸಿತು.  ಪುನಃ ‘ಸ್ವಾತಂತ್ರ್ಯದ’ ಮೊರೆ ಹೋದೆ 😀

ಅಷ್ಟರಲ್ಲಿ ಬ್ರೇಕ್ ನ ಸಮಯ ಮುಗಿದಿತ್ತು. ಮತ್ತೆ sessions ಶುರುವಾದ್ದರಿಂದ ಒಳಗೆ ಹೊರಟೆವು. ‘ಬದುಕಿದೆಯಾ ಬಡಜೀವವೇ’ ಎಂದುಕೊಂಡೆ!!  ಆದರೆ ನನ್ನ ಸಮಾಧಾನ ತುಂಬ ಸಮಯ ಉಳಿಯಲಿಲ್ಲ. ಒಳಗಡೆ ಯಾವುದೋ team-activity ಏರ್ಪಡಿಸಿದ್ದರು. ಅದರಲ್ಲಿ ನಾವು ಒಂದಿಷ್ಟು ಜನ ಒಂದು ಟೀಂ ಮಾಡಿಕೊಳ್ಳಬೇಕಿತ್ತು. ಹತ್ತಿರ ಕುಳಿತವರೆಲ್ಲ ಸೇರಿ ಟೀಂ ರೆಡಿ ಆಯಿತು. ಬಹಳ ಸಹಜವಾಗಿ ನಾವೆಲ್ಲ ಇಂಗ್ಲಿಷ್ ನಲ್ಲಿ ಮಾತನಾಡಲು ಪ್ರಾರಂಭಿಸಿದೆವು. ಎರಡು ದಿನ ನಾನು ಹಾಗೂ ದೀಪಾ ಮೇಡಂ ಪರಸ್ಪರ ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಿರುವುದನ್ನು ನೋಡಿ ಅದು ಯಾವ ಭಾಷೆ ಎಂದು ಕೇಳಿ ತಿಳಿದುಕೊಂಡಿದ್ದ ಜೆನ್ನಿಫರ್  ಮೆಲ್ಲಗೆ ನನ್ನ ಬಳಿ ಪಿಸುಗುಟ್ಟಿದಳು “ನೀವೆಲ್ಲ ಭಾರತೀಯರಲ್ಲವೇ? ಯಾಕೆ ಇಂಗ್ಲಿಷ್ ನಲ್ಲಿ ಮಾತನಾಡಿಕೊಳ್ಳುತ್ತೀರಿ? ನಿಮ್ಮ ಭಾಷೆ ಕನ್ನಡ ಅಲ್ಲವೇ?”. ಎದೆ ಧಸಕ್ಕೆಂದಿತು!!

ಪ್ರೀತಿ ಕೇರಳದವಳು. ಅವಳ ಭಾಷೆ ಮಲಯಾಳಂ.

ವಿಜಯಲತಾ ಆಂಧ್ರದವಳು. ಅವಳದು ತೆಲುಗು.

ಸಬಿತಾ ಮಣಿಪುರದವಳು. ಅವಳ ಭಾಷೆ ಮಣಿಪುರಿ.

ರಾಮಲತಾ ತಮಿಳುನಾಡಿನವಳು. ಅಲ್ಲಿಯ ಭಾಷೆ ತಮಿಳು.

ದೇವರಾಣೆಗೂ ನಮಗ್ಯಾರಿಗೂ ಇನ್ನೊಬ್ಬರ ಭಾಷೆ ಗೊತ್ತಿಲ್ಲ !! ಮಾತನಾಡುವುದು ಹೇಗೆ?

ಜೆನ್ನಿಫರ್ ಗೆ ಹೇಳಿದೆ, “ನಮ್ಮ ದೇಶದಲ್ಲಿ 29 ರಾಜ್ಯಗಳಿವೆ. ಸಂವಿಧಾನ ಅಂಗೀಕರಿಸಿದ 15 ಭಾಷೆಗಳ ಜೊತೆಗೆ ಲಿಪಿ ಕೂಡ ಇಲ್ಲದ ಅದೆಷ್ಟೋ ಭಾಷೆಗಳಿವೆ”.  ಆಕೆ ಕಂಗಾಲಾದಳು.

ಮತ್ತೆ ಮುಂದುವರೆಸಿದೆ.. “ನನ್ನ ಕರ್ನಾಟಕ ರಾಜ್ಯದಲ್ಲೇ ಕನ್ನಡದ ಹೊರತಾಗಿ ತುಳು, ಕೊಂಕಣಿ, ಕೊಡವ ಇತ್ಯಾದಿ ಭಾಷೆಗಳಿವೆ”.  ಅವಳು ನನ್ನನ್ನು ಅಪನಂಬಿಕೆಯಿಂದ ನೋಡತೊಡಗಿದಳು.

“ಕನ್ನಡದ್ದೇ variations ಎಷ್ಟರಮಟ್ಟಿಗೆ ಇದೆಯೆಂದರೆ ಬೀದರ್ ನ ಕನ್ನಡ ಮಂಡ್ಯದವರಿಗೆ ಅರ್ಥವಾಗಲ್ಲ, ಮಂಗಳೂರು ಕನ್ನಡ ಹುಬ್ಬಳ್ಳಿಯಲ್ಲಿ ತಿಳಿಯೋಲ್ಲ” ಎಂದೆಲ್ಲ ಹೇಳ ಹೊರಟವಳು ಆಕೆಯ expressions ನೋಡಿ ತೆಪ್ಪಗಾದೆ !!

ಈ ವಿಚಿತ್ರ ದೇಶದವರ ಸಹವಾಸವೇ ಸಾಕು ಎಂದುಕೊಂಡಳೋ ಏನೋ.. ಕೊಂಚ ಸಮಯದ ಬಳಿಕ ಕಣ್ಣು ಬಿಟ್ಟು ಬೇರೆ ಏನೂ ಕಾಣಿಸದಂತೆ ಬುರ್ಖಾ ಹಾಕಿದ್ದ ಪಾಕಿಸ್ತಾನೀ ಹುಡುಗಿಯರ ಬಗ್ಗೆ ನನ್ನ ಬಳಿ ಪ್ರಶ್ನಿಸಿದಳು.  ಎಲ್ಲಿಲ್ಲದ ಉತ್ಸಾಹ ತುಂಬಿಕೊಂಡು ಅಲ್ಲಿನ conservative ಜನಗಳ ಬಗ್ಗೆ ಕೊರೆದೆ!! ನಮ್ಮ ದೇಶದಲ್ಲಿ ಮುಸ್ಲಿಮರ ಪರಿಸ್ಥಿತಿ ಹಾಗಿಲ್ಲ ಎಂದು ಡೆಲ್ಲಿಯ ಶಬಾನಾಳನ್ನು ತೋರಿಸಿ ಉದಾಹರಣೆ ಕೊಟ್ಟೆ. ಇನ್ನಷ್ಟು effective ಆಗಿರಲಿ ಎಂದು ಮಲಾಲಾ ಯೂಸುಫ್ ಜಾಯ್ ವಿಷಯ ತೆಗೆದೆ. ನನ್ನ ದುರಾದೃಷ್ಟ – ಆಕೆಗೆ ಮಲಾಲಾ ಯಾರೆಂದೇ ಗೊತ್ತಿಲ್ಲ :(  ನೊಬೆಲ್ ಪ್ರಶಸ್ತಿ ವಿಜೇತೆ ಎಂದರೂ ಗೊತ್ತಾಗಲಿಲ್ಲ.

ಆದರೆ ನನಗೆ ಜ್ಞಾನೋದಯವಾಗಿತ್ತು. ಫಿಲಿಫೈನ್ಸ್ ಬಿಟ್ಟು ಬೇರೆ ಯಾವ ದೇಶಕ್ಕೂ ಹೋಗಿರದ, ಪ್ರಪಂಚದ ಇತರ ದೇಶಗಳ ಬಗ್ಗೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಓದಿಯೂ ಅಷ್ಟಾಗಿ ಗೊತ್ತಿರದ ಇವಳಿಗೆ ನಮ್ಮ ದೇಶ ಅದೆಷ್ಟು ವಿಚಿತ್ರವಾಗಿ ಕಾಣಿಸುತ್ತಿದೆಯಲ್ಲ ಎನ್ನಿಸಿತು. ಸಂಪೂರ್ಣ ಹೊರಗಿನವರಿಗೆ ನಾವು ಅದೆಷ್ಟು ಸೋಜಿಗದ ದೇಶವಾಗಿ ಗೋಚರಿಸುತ್ತೇವೆ ಎನ್ನುವುದು ಅರ್ಥವಾಯಿತು.

ಇಡೀ ದೇಶದಲ್ಲಿ ನೂರಾರು ಭಾಷೆಗಳು….

ಸಾವಿರಾರು ಜಾತಿಗಳು….

ಒಂದೇ ಜಾತಿಯಲ್ಲೂ ಊರು ಬದಲಾದಂತೆ ಬದಲಾಗುವ ಆಚರಣೆಗಳು….

ಕೋಟಿಗಟ್ಟಲೆ ದೇವರುಗಳು…..

ಅದಕ್ಕಿಂತ ಜಾಸ್ತಿ ದೇವಸ್ಥಾನಗಳು…

ಚಿತ್ರ-ವಿಚಿತ್ರ ನಂಬಿಕೆಗಳು-ಹರಕೆಗಳು….

ಹೊರಗಿನವರಿಗೆ ಗಾಭರಿ ಹುಟ್ಟಿಸುವಷ್ಟು ವೈವಿಧ್ಯತೆ ಹೊಂದಿರುವ ನಾವು ಅದು ಹೇಗೆ ಒಂದೇ ದೇಶವಾಗಿ ಇನ್ನೂ ಉಳಿದಿದ್ದೇವೆ ಎಂದು ಅಚ್ಚರಿಯಾಯಿತು. “ವಿವಿಧತೆಯಲ್ಲಿ ಏಕತೆ” ಅನುಭವಕ್ಕೆ ಬಂದಿತು.

ಜೆನ್ನಿಫರ್ ಎತ್ತಿದ ಅನೇಕ ಪ್ರಶ್ನೆಗಳಿಗೆ ಸ್ವತಃ ನನ್ನಲ್ಲಿ ಉತ್ತರಗಳಿಲ್ಲ. ಇಂಥವೆಲ್ಲ ಪ್ರಶ್ನೆಗಳೂ ಇರಬಹುದು ಎಂಬುದು ಎಂದಿಗೂ ನನ್ನ ಗಮನಕ್ಕೆ ಬಂದಿರಲಿಲ್ಲ. ಅವಳ  ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ. ಸಿಗುತ್ತವೆ ಎನ್ನುವ ನಂಬಿಕೆ ಖಂಡಿತಾ ಇಲ್ಲ !!

This entry was posted in ಭಾವಲೋಕ...!!!. Bookmark the permalink.

3 Responses to “ವಿವಿಧತೆಯಲ್ಲಿ ಏಕತೆ” ಸಾಕ್ಷಾತ್ಕಾರವಾದ ಕ್ಷಣಗಳು !!

 1. H sriharsha says:

  Madam ನಿಮ್ಮ ಭಾವಲೋಕದ ಸಾಹಿತ್ಯ ನಿಜವಾಗಿಯೂ ನನ್ನನು ಭಾವುಕನಾಗಿ ಮಾಡಿತು.
  ನಿಮ್ಮ ಬರವಣಿಗೆಯ ಶ್ಯಲಿ ಪದ ಜೋಡನೆ ನನಗೆ ತುಂಬ ಹಿಡಿಸಿತು.
  ನಿಮ್ಮ ಮುಂಬರುವ ಕಥೆಗಳನ್ನು ಓದಲು ನಾನು ಕಾಯುತ್ತಿರುತೇನೆ.

  • ChetanaHegde says:

   Thank you Sriharsha :)
   ಆದ್ರೆ ಇಲ್ಲಿ ಬರೆದಿರೋ ಎಲ್ಲ ಲೇಖನಗಳು ಕಥೆ ಅಲ್ಲ, ನಿಜವಾಗಿಯೂ ನಡೆದಿದ್ದು :)

 2. H sriharsha says:

  ನಿಮ್ಮ ನಿಜ ಜೀವನದಲ್ಲಿ ನಡೆದ ಸಂಗತಿಗಳ ಲೇಖನ ತುಂಬ ಸೊಗಸಾಗಿದೆ madam.

Leave a Reply

Your email address will not be published. Required fields are marked *