“ಬಳಸಿ ಮತ್ತು ಬೀಸಾಡಿ” ಎಂಬ ವ್ಯಾಧಿ

ಈ ‘use and throw’ ಎಂಬ ವಾಕ್ಯವನ್ನು ಯಾರು ಮೊದಲು ಹೇಳಿ ಆಚರಣೆಗೆ ತಂದರೋ ಗೊತ್ತಿಲ್ಲ, ಆ ಮಹಾನುಭಾವ ಸಿಕ್ಕಿದರೆ ಮೊದಲು ಆತನನ್ನು ಎಸೆಯಬೇಕು!! ಪ್ರಕೃತಿಯನ್ನು ಮನುಷ್ಯ ಅದೆಷ್ಟು ಕೇವಲವಾಗಿ ನೋಡುತ್ತಿದಾನೆ ಎಂಬುದಕ್ಕೆ ಈ ‘ಬಳಸಿ ಮತ್ತು ಬೀಸಾಡಿ’ ಎಂಬ ಧೋರಣೆಯೇ ಸಾಕ್ಷಿ. ಲೋಟ, ತಟ್ಟೆ, ಬಾಟಲಿ, ಪೆನ್ನು, ಕಾಗದ/ಪ್ಲಾಸ್ಟಿಕ್ ಕವರುಗಳು, ಜ್ಯೂಸು ಟಿನ್ ಗಳು – ಹೀಗೆ ಯಾವುದನ್ನು ನೋಡಿದರೂ ಬಳಸಿ ಬೀಸಾಡುವಂಥದ್ದೇ. ಮರುಬಳಕೆಯ ಯೋಚನೆಯೇ ಇಲ್ಲ. ಅಂಗಡಿಗೆ ಹೋಗಿ ದಿನಸಿ ಸಾಮಾನು ಕೊಂಡರೆ ಅದು ಪ್ಲಾಸ್ಟಿಕ್ ಕವರ್ ನಲ್ಲಿ ಪ್ಯಾಕ್ ಆಗಿ ಬರುತ್ತದೆ. ಮನೆಗೆ ಬಂದು ಕವರ್ ಬೀಸಾಡುವುದೇ. ಕೇವಲ 15-20 ವರ್ಷಗಳ ಹಿಂದೆ ಮನೆಯಿಂದ ಚೀಲ ಕೊಂಡೊಯ್ದು ಸಾಮಾನು ತರುತ್ತಿದ್ದವರು ನಾವೇನಾ?   ಇದು ಇತ್ತೀಚೆಗೆ ಜನರಲ್ಲಿ ಸೇರುತ್ತಿರುವ ಹಣದ ಮದದ ಪರಿಣಾಮವೋ, ಇಂಥ ವಸ್ತುಗಳನ್ನು ಕನಿಷ್ಟ ಬೆಲೆ/ಸಮಯದಲ್ಲಿ ಉತ್ಪಾದಿಸಬಲ್ಲ ತಂತ್ರಜ್ಞಾನ/ಔದ್ಯಮೀಕರಣದ ಪ್ರಭಾವವೋ ಗೊತ್ತಿಲ್ಲ, ಒಟ್ಟಿನಲ್ಲಿ ಎಲ್ಲರೂ ಮೊರೆ ಹೋಗುವುದು ಬೀಸಾಡಬಲ್ಲಂಥ ವಸ್ತುಗಳೆಡೆಗೆ.  ಏರ್ಪೋರ್ಟ್, ಬಸ್ ನಿಲ್ದಾಣ ಇಂಥ ಸಾರ್ವಜನಿಕ ಸ್ಥಳಗಳಲ್ಲಿ ಮನೆಯಿಂದ ತಂದ ಬಾಟಲಿಗೆ ನೀವು ನೀರು ತುಂಬಿಸಿಕೊಂಡರೆ ಕುಹಕದಿಂದ ನೋಡುವ ನೋಟಗಳು ನೂರಾರು. ದುಡ್ಡು ಕೊಟ್ಟು ಹೊಸ ಬಾಟಲಿ ಖರೀದಿಸದ ಜಿಪುಣರು ನೀವೆಂಬ ಹಣೆಪಟ್ಟಿ. ಸ್ಟೇಟಸ್ ಗೆ ಕುಂದು. ಮನೆಯಲ್ಲಿ ಚಿಕ್ಕ ಪಾರ್ಟಿ ಇಟ್ಟುಕೊಂಡು ಸ್ಟೀಲ್ ಲೋಟ, ತಟ್ಟೆ ಬಳಸಿದರೆ ನೀವು ಅನಾಗರೀಕರು. ಒಬ್ಬೊಬ್ಬರಿಗೂ ನೀರಿನ ಹೊಸ ಬಾಟಲಿಯನ್ನೇ ಕೊಡಬೇಕು. ಅದರಲ್ಲಿ ಅರ್ಧ ಗುಟುಕು ಮಾತ್ರ ಕುಡಿದು ಉಳಿದೆಲ್ಲವನ್ನೂ ಬಾಟಲಿಯ ಸಮೇತ ಎಸೆಯುವುದೇ ಫ್ಯಾಷನ್. ನೀರು ಉಳಿದಿದೆಯಲ್ಲ ಎಂದು ನೀವು ಬಾಟಲಿ ಕೈಗೆತ್ತಿಕೊಂಡು ಹೊರಟರೆ ನಿಮ್ಮನ್ನು ಗತಿ ಇಲ್ಲದವರು ಎಂಬಂತೆ ನೋಡುವ ಜನ ಹಲವಾರು.

ಭೂಮಿಯೇನು ಕಸದ ತೊಟ್ಟಿಯೇ, ಎಲ್ಲವನ್ನೂ ಬೀಸಾಡಲಿಕ್ಕೆ? ನಾವೇನಾದರೂ ಪಕ್ಕದ ಗ್ರಹವನ್ನು ಬಾಡಿಗೆಗೆ ಪಡೆದಿದ್ದೆವೆಯೇ, ಕಸವನ್ನು ಚೆಲ್ಲಲೆಂದು? ‘ಬಳಸಿ, ಬೀಸಾಡಿ’ ಎನ್ನುವ ಸ್ಲೋಗನ್ ಹುಟ್ಟು ಹಾಕಿದವರಿಗೆ ಬೀಸಾಡುವುದು ಎಲ್ಲಿ ಎಂಬ ಅರಿವಿತ್ತೇ? ಹೀಗೆಯೇ ನಾವು ಎಲ್ಲವನ್ನೂ ಬೀಸಾಡುತ್ತ ಪ್ರತೀ ದಿನ ಎಷ್ಟು ಟನ್ ಕಸವನ್ನು ಉತ್ಪಾದಿಸುತ್ತಿದ್ದೇವೆ? ಇಂಥ ಬಳಸಿ ಬೀಸಾಡುವ ವಸ್ತುಗಳ ತಯಾರಿಕೆಗೆ ನಾವು ವ್ಯಯಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳೆಷ್ಟು? ನೀರು – ವಿದ್ಯುತ್ ಬಳಕೆ ಎಷ್ಟು? ಇದರಿಂದಾಗುವ ಪರಿಸರ ಮಾಲಿನ್ಯವೆಷ್ಟು? ಯಾವುದರ ಪರಿವೆಯೂ ನಮಗಿಲ್ಲ.

ನನಗೆ ಅತ್ಯಂತ ಬೇಸರವಾಗುವುದೆಂದರೆ ಇಂತಹ ಬಳಸಿ ಬೀಸಾಡುವ ದುರಭ್ಯಾಸವು ಇತ್ತೀಚೆಗೆ ಶಾಲಾ ಮಕ್ಕಳ ಪುಸ್ತಕಗಳಿಗೂ ವಿಸ್ತರಿಸಿರುವುದು. ನಾವು ಚಿಕ್ಕವರಿರುವಾಗ ಒಂದು ಕ್ಲಾಸಿನ ಪಠ್ಯಪುಸ್ತಕಗಳನ್ನು ಅದೆಷ್ಟೋ ಮಕ್ಕಳು ಸರತಿಯಲ್ಲಿ ಬಳಸುತ್ತಿದ್ದೆವು. ಅಣ್ಣನದೋ ಅಕ್ಕನದೋ ಪುಸ್ತಕ ತಮ್ಮ-ತಂಗಿಗೆ. ಪಕ್ಕದ ಮನೆಯಲ್ಲಿ ಒಂದು ವರ್ಷ ದೊಡ್ಡ ಮಗುವಿದ್ದರೆ ಅದರ ಪುಸ್ತಕ ಮುಂದಿನ ವರ್ಷ ಈಚೆ ಮನೆಯ ಮಗುವಿಗೆ, ಮತ್ತೆ ಮುಂದಿನ ವರ್ಷ ಇನ್ನೊಂದು ಮಗುವಿಗೆ… ಹೀಗೆ ಒಂದು ಪುಸ್ತಕ ಹಲವರ ಕೈ ದಾಟುತ್ತಿತ್ತು. ಪ್ರತಿಯೊಬ್ಬರೂ ಹೊಸ ಪುಸ್ತಕಗಳನ್ನು ಕೊಳ್ಳುವ ಪ್ರಮೇಯವೇ ಇರಲಿಲ್ಲ. ಪ್ರತೀ ಬಾರಿ ಕೈ ಬದಲಾಗುವಾಗ ಪುಸ್ತಕದ ರೇಟು ಕಮ್ಮಿಯಾಗುತ್ತಾ ಹೋಗುತ್ತಿದ್ದುದರಿಂದ ಪಾಲಕರಿಗೆ ಆರ್ಥಿಕ ಹೊರೆಯೂ ಇರಲಿಲ್ಲ!!  ಆದರೆ, ಈಗೇನಾಗಿದೆ? ಚಿಕ್ಕ ಮಕ್ಕಳ ಹೆಚ್ಚಿನ ಪುಸ್ತಕಗಳು ‘ವರ್ಕ್ ಬುಕ್’ ಎಂಬ ನಾಮಫಲಕ ಹೊತ್ತಿವೆ. ಬಣ್ಣ ಬಣ್ಣದ ಚಿತ್ರವಿರುವ ಹೆಚ್ಚು ಹೆಚ್ಚು ದುಡ್ಡಿನ ಪುಸ್ತಕಗಳು. ನಾಲ್ಕು ಸಾಲಿನ ವಿವರಣೆಗೆ ಒಂದು ದೊಡ್ಡ ಚಿತ್ರ. ಅಲ್ಲಿಯೇ ಅದಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಗಳು. ಉತ್ತರ ಬರೆಯಲು ಅಲ್ಲಿಯೇ ಖಾಲೀ ಜಾಗ. ಮಗು ಅದೇ ಪುಸ್ತಕದಲ್ಲಿಯೇ ಉತ್ತರ ಬರೆಯಬೇಕು. ಹಾಗಾಗಿ ಪ್ರತೀ ಪುಟದಲ್ಲೂ ಅರ್ಧಕ್ಕರ್ಧ ಖಾಲೀ ಜಾಗ. ಇಡೀ ಪುಸ್ತಕವೇ ಒಂಥರಾ ‘ಬಿಟ್ಟಸ್ಥಳ ತುಂಬಿರಿ’ ಮಾದರಿಯಲ್ಲಿರುತ್ತದೆ. ಒಂದು ಮಗು ಆ ಪುಸ್ತಕ ಬಳಸಿಯಾದ ಮೇಲೆ ಬೇರೆ ಯಾರ ಬಳಕೆಗೂ ಅದು ಉಪಯುಕ್ತವಲ್ಲ. ಹೀಗಾಗಿ ಅದೇ ಮಗುವಿನ ತಮ್ಮನೋ ತಂಗಿಯೋ ಮತ್ತೆ ಅಂಥದೇ ಪುಸ್ತಕವನ್ನು ಖರೀದಿಸಿಯೇ ಬಳಸಬೇಕು.  ಈ ರೀತಿಯ ಪುಸ್ತಕಗಳಿಂದ ಪ್ರತೀ ವರ್ಷ ಅದೆಷ್ಟು ಕಾಗದ ಅನಗತ್ಯವಾಗಿ ಖರ್ಚಾಗುವುದು? ಇದರಿಂದಾಗುವ ನಷ್ಟವೇನು?

ಪಠ್ಯ ಪುಸ್ತಕಗಳದ್ದು  ಈ ಕಥೆಯಾದರೆ ನೋಟ್ ಬುಕ್ಕುಗಳದ್ದು ಇನ್ನೊಂದು ವ್ಯಥೆ. ಚಿಕ್ಕಂದಿನಲ್ಲಿ ನಾವು ಒಂದು ವರ್ಷದ ನೋಟ್ ಬುಕ್ಕುಗಳಲ್ಲಿ ಹೆಚ್ಚುಳಿದ ಹಾಳೆಗಳನ್ನು ಕಿತ್ತು ನಾವೇ ದಬ್ಬಣದಿಂದ ಹೊಲಿದು ಅಂಟು ಹಚ್ಚಿ ಹೊಸ ನೋಟ್ ಬುಕ್ ತಯಾರಿಸುತ್ತಿದ್ದೆವು. ಹೀಗೆ ಕನಿಷ್ಠ 2-3 ನೋಟ್ ಬುಕ್ ತಯಾರಾಗಿ ಮುಂದಿನ ವರ್ಷಕ್ಕೆ ಬಳಕೆಯಾಗುತ್ತಿತ್ತು.  ಆದರೆ ಈಗ ಶಾಲೆಗಳಲ್ಲಿ ಅಂಥವನ್ನು ಬಳಸುವಂತೆಯೇ ಇಲ್ಲ. ಬಹುತೇಕ ಶಾಲೆಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಕೊಡುತ್ತವೆ. ಮತ್ತು, ಅವರಿಂದಲೇ ಪಠ್ಯಪುಸ್ತಕ, ನೋಟ್ ಬುಕ್ ಇತ್ಯಾದಿ ಖರೀದಿಸುವುದು ಕಡ್ಡಾಯ. ಪ್ರತೀ ಶಾಲೆಯೂ ತನ್ನ ಲೋಗೋ ಇರುವ ಸಾಮಗ್ರಿಗಳನ್ನೇ ಬಳಸುವಂತೆ ತಾಕೀತು ಮಾಡುತ್ತದೆ. ಇದು ರಫ್ ವರ್ಕ್ ಬುಕ್ ಗೂ ಅನ್ವಯಿಸುತ್ತದೆ. ಹೀಗಾಗಿ ಹಿಂದಿನ ವರ್ಷದ ನೋಟ್ ಬುಕ್ ನ ಉಳಿದ ಹಾಳೆಗಳು ಬುಕ್ ಸಮೇತ ರದ್ದಿಗೆ ಹೋಗಬೇಕು ಅಷ್ಟೇ. ಹೀಗೆ ಬಳಕೆಗೇ ಬಾರದೇ ಸೀದಾ ರದ್ದಿಗೆ ಹೋಗುವ ಕಾಗದದ ಪ್ರಮಾಣವೆಷ್ಟು? ಇದರ ಯೋಚನೆ ಯಾರಿಗೂ ಇಲ್ಲವೇ?

ಪ್ಲಾಸ್ಟಿಕ್ ಬಳಕೆ ನಿಷೇಧ, ಕಾಗದದ ಕವರುಗಳ ಬಳಕೆಗೆ ಪ್ರೋತ್ಸಾಹ – ಇಂಥ ಚೇತೋಹಾರೀ ಬೆಳವಣಿಗೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ಸರಕಾರವಾಗಲೀ, ಶಿಕ್ಷಣ ಇಲಾಖೆಗೆ ಸಂಬಂಧಿಸಿದವರಾಗಲೀ ಈ ಬಗ್ಗೆ ಗಮನ ಹರಿಸಿ ಅನಗತ್ಯ ಖಾಲೀ ಜಾಗ ಬಿಡುವ ಮಾದರಿಯ ಪುಸ್ತಕಗಳ ಮುದ್ರಣವನ್ನು ಕಡಿಮೆ ಮಾಡಬೇಕು. ಪುಸ್ತಕದ ಮರುಬಳಕೆ ಆಗಬೇಕು. ರಫ್ ವರ್ಕ್ ನೋಟ್ ಬುಕ್ ಗಳೂ ಹೊಚ್ಚ ಹೊಸದೇ ಆಗಿರಬೇಕೆಂಬ ಖಾಸಗೀ ಶಾಲೆಗಳ ಧೋರಣೆ ಬದಲಾಗಬೇಕು.  ಶಾಲಾ ದಿನಗಳಿಂದಲೇ ಈ ರೀತಿಯ ಅಪವ್ಯಯದ ಅಭ್ಯಾಸ ಮಕ್ಕಳಿಗೆ ಆಗಬಾರದು. ನೈಸರ್ಗಿಕ ಸಂಪತ್ತಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಮಿತವ್ಯಯದ ಪಾಠ  ಮಾಡಬೇಕು. ಆಗ ಮಾತ್ರ ಅವರು ಮುಂದೆ ಜವಾಬ್ದಾರಿಯುತ ನಾಗರಿಕರಾಗಲು ಸಾಧ್ಯ. ಕೊನೆಯದಾಗಿ, ನಾವೆಲ್ಲರೂ ಆದಷ್ಟು ಮಟ್ಟಿಗೆ ಯಾವುದೇ ವಸ್ತುವಿನ ಮರುಬಳಕೆ ಮಾಡಲು ಪ್ರಯತ್ನಿಸಬೇಕೇ ಹೊರತು ‘ಬಳಸಿ ಮತ್ತು ಬೀಸಾಡಿ’ ಧೋರಣೆ ಬಿಡಬೇಕು.

Edited version of this article has been published in a Kannnada Daily Vishwavani on 3rd July 2017.  http://epaper.vishwavani.news/bng/e/bng/03-07-2017/13

 

 

This entry was posted in ಭಾವಲೋಕ...!!!. Bookmark the permalink.

Leave a Reply

Your email address will not be published. Required fields are marked *