ರೇಸಿಸಂನ ಬಲಿಪಶುವೊಬ್ಬಳ ಕಥೆ-ವ್ಯಥೆ!!

“ಆಫ್ರಿಕಾ ಮತ್ತು ಅಮೆರಿಕಾದಂಥ ದೇಶಗಳಲ್ಲಿ ವರ್ಣಬೇಧ ನೀತಿ ಜಾರಿಯಲ್ಲಿದ್ದ ಕಳೆದ ಶತಮಾನದಲ್ಲಿ ಕಪ್ಪು ಜನರನ್ನು ಗುಲಾಮರೆಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು”

“ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಬಿಳಿಯನೊಬ್ಬ ಆವರನ್ನು ತಳ್ಳಿದ.”

“ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ನೆಲ್ಸನ್ ಮಂಡೇಲಾ ಬಹಳ ವರ್ಷಗಳಿಂದ ಹೋರಾಡುತ್ತಿದ್ದಾರೆ.”

ಇತ್ಯಾದಿ ವಿಷಯಗಳನ್ನು ಪ್ರೈಮರಿ-ಹೈಸ್ಕೂಲುಗಳಲ್ಲಿ ಓದಿ ಸಮಾಜವಿಜ್ಞಾನ ಪರೀಕ್ಷೆಯಲ್ಲಿ ಪುಟಗಟ್ಟಲೇ ಗೀಚುವಾಗ ನಾನೂ ಕೂಡ ಮುಂದೆ ವರ್ಣಬೇಧಕ್ಕೆ ತುತ್ತಾಗಬಹುದೆಂಬ ಕಲ್ಪನೆ ನನಗಿರಲಿಲ್ಲ! ತಿಳಿಯುವ ವಯಸ್ಸೂ ನನ್ನದಾಗಿರಲಿಲ್ಲ.

ಯಾರು ಹೇಳಿದ್ದು, ವರ್ಣಬೇಧ ಅಥವಾ ರೇಸಿಸಂ ಎನ್ನುವುದು ಕಪ್ಪು ವರ್ಣೀಯರ ವಿರುದ್ಧ ಎಂದು? ಅತ್ಯಂತ ಬೆಳ್ಳಗಿರುವ ನಾನು ಕಾಲೇಜು ಓದುವ ಹಂತದಿಂದಲೇ ವರ್ಣಬೇಧಕ್ಕೆ ತುತ್ತಾದ ಬಗೆಬಗೆಯ ಕಥೆಗಳನ್ನು ಹೇಳುತ್ತೇನೆ ಕೇಳಿ.

ಮಲೆನಾಡಿನ ಊರುಗಳಲ್ಲಿ ಹೆಣ್ಣು-ಗಂಡೆಂಬ ಬೇಧವಿಲ್ಲದೇ ಬಹುತೇಕ ಜನರು ಬೆಳ್ಳಗಿರುವುದು ಸರ್ವೇ ಸಾಮಾನ್ಯ. ಆದರೆ ನಾನು ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಬೆಳ್ಳಗಿದ್ದೇನೆ. ಜೊತೆಗೆ ಕೂದಲೂ ಸ್ವಲ್ಪ ಕೆಂಚು! ಅದರಲ್ಲಿ ನನ್ನದೇನು ತಪ್ಪಿದೆ? ನನ್ನ ಮೈಬಣ್ಣ  ನನ್ನ choice  ಅಲ್ಲವಲ್ಲ. ಆದರೆ ಶಿಕ್ಷೆ ಮಾತ್ರ ಪ್ರತೀದಿನ ಅನುಭವಿಸುತ್ತಿದ್ದೇನೆ. ಚಿಕ್ಕಂದಿನಿಂದಲೂ ಹಲವು ಸಂಬಂಧಿಗಳೂ, ಶಾಲೆಯಲ್ಲಿ ಕೆಲವು ಮೇಷ್ಟ್ರುಗಳೂ ಮುದ್ದಿನಿಂದ ನನ್ನನ್ನು ‘ಬೆಳ್ಳಕ್ಕಿ’ ಎಂದೇ ಕರೆಯುತ್ತಿದ್ದುದು! ಆದರೆ ಪಿಯುಸಿಗೆ ಬರುತ್ತಿದ್ದಂತೆ ಸೀನಿಯರ್ಸ್ ಗಳಿಂದ ವಿಧವಿಧದ ಕಾಮೆಂಟ್ ಗಳಿಗೆ ತುತ್ತಾಗಬೇಕಾಯಿತು. ಬಿಎ ಹುಡುಗರು ‘ನಂದಿನಿ ಮಿಲ್ಕ್’ ಎಂದೂ, ಬಿಎಸ್ಸಿ ಹುಡುಗರು ‘white precipitate’ ಎಂದೂ ಹೆಸರಿಟ್ಟು ತಮ್ಮ ಪಾಂಡಿತ್ಯ ಪ್ರದರ್ಶಿಸಿದರು. ಒಮ್ಮೆ ನಮ್ಮ ಊರಿನ MP ಯ ಮನೆ ಮುಂದೆ ಹಾದುಹೋಗುವಾಗ ಕಾವಲಿನ ಪೋಲಿಸ್ ಪೇದೆ ‘ಸೋನಿಯಾ ಗಾಂಧಿ’ ಎಂದ. “ಬಿಜೆಪಿ MP ಮನೆ ಮುಂದೆ ನಿಂತು ಕಾಂಗ್ರೆಸ್ ಪಾರ್ಟಿಯವರ ಹೆಸರು ಹೇಳಲು ನಾಚಿಕೆ ಆಗಲ್ವಾ ಎಂದು ತಿರುಗಿ dialogue ಹೊಡೆದೆ!! ಮತ್ತೆ ನನ್ನ ಸುದ್ದಿಗೆ ಬರಲಿಲ್ಲ ಆತ!!  ಮುಂದೆ ಮಾಸ್ಟರ್ಸ್ ಮಾಡಲು ಧಾರವಾಡಕ್ಕೆ ಹೋದಮೇಲೆ ಅಧಿಕೃತವಾಗಿ ಸೀನಿಯರ್ಸ್ ragging ಮಾಡಿದರು – ಕಾಲೇಜ್ ಹಾಗೂ  ಹಾಸ್ಟೆಲ್  ಎರಡರಲ್ಲೂ. ಕೇವಲ ನನ್ನ ಬಣ್ಣದ ಬಗ್ಗೆ.

ಆದರೆ ನಿಜವಾದ ತೊಂದರೆಗಳು ಶುರುವಾದದ್ದು ನಾನು ಅಕಾಡೆಮಿಕ್ ಜಗತ್ತು ಬಿಟ್ಟು ಹೊರಜಗತ್ತಿಗೆ ಬಂದಾಗಲೇ. ಅಂದರೆ ಬೆಂಗಳೂರಿಗೆ ಕಾಲಿಟ್ಟಾಗಿನಿಂದ. ಬಿಎಂಟಿಸಿ ಬಸ್ ಕಂಡಕ್ಟರ್ ಗಳು ನನ್ನ ಬಳಿ ಕಷ್ಟಪಟ್ಟು ಇಂಗ್ಲಿಷ್ ನಲ್ಲೋ ಅಥವಾ ‘ನಾರ್ತಿ’ ಎಂದುಕೊಂಡು ಹಿಂದಿಯಲ್ಲೋ ಮಾತಾಡುವಾಗ ಕಸಿವಿಸಿಯಾಗುತ್ತದೆ. “ಕನ್ನಡದಲ್ಲೇ ಮಾತಾಡ್ರೀ” ಎಂದು ನಾನು ರೇಗಿದ್ದು ಹಲವು ಬಾರಿ. ಇನ್ನು ‘ಮೋರ್’, ‘ಫುಡ್ ವರ್ಲ್ಡ್’ ಗಳಂಥ ಮಾಲ್ ಗಳಲ್ಲಿ ದಿನಸಿ/ತರಕಾರಿ ಕೊಳ್ಳುವಾಗ ಅಲ್ಲಿನ ಹುಡುಗ/ಹುಡುಗಿಯರು ನನ್ನ ಬಳಿ ಇಂಗ್ಲಿಷ್ ನಲ್ಲೇ ವ್ಯವಹರಿಸುವುದು. ಅದೆಷ್ಟೋ ಬಾರಿ ನಾನು ಜಗಳಕ್ಕೆ ನಿಂತಿದ್ದಿದೆ  “ನನಗೆ ಕನ್ನಡ ಬರಲ್ಲ ಎಂದು ಹೇಗೆ ಡಿಸೈಡ್ ಮಾಡಿದ್ರಿ? ಕನ್ನಡ ಬರದವರ ಬಳಿಯೂ ನೀವು ಕನ್ನಡ ಮಾತಾಡಿ ಅವರು ಕಲಿಯುವಂತೆ ಮಾಡಬೇಕೇ ಹೊರತು ಹಿಂದಿ/ಇಂಗ್ಲಿಷ್ ಮಾತಾಡೋದು ತಪ್ಪು” ಎಂದು ಪಕ್ಕಾ ‘ಕರವೇ’ ಕಾರ್ಯಕರ್ತೆಯಂತೆ ಪೋಸು ಕೊಟ್ಟಿದ್ದಿದೆ!!

ಇನ್ನು ನನ್ನ ಬಣ್ಣ ನನಗೆ ಆರ್ಥಿಕವಾಗಿ ಬಹಳಷ್ಟು ಹಾನಿ ಮಾಡಿದೆ! ಪರವೂರುಗಳಿಗೆ ಹೋದಾಗ ನನಗೆ ಮಾತ್ರ ಜಾಸ್ತಿ ಬೆಲೆ ಹೇಳಿ ನನ್ನನ್ನು ಯಾಮಾರಿಸಲು ಪ್ರಯತ್ನಿಸಿದವರು ಬಹಳ ಜನ. ಒಮ್ಮೆ ನನ್ನ ಆತ್ಮೀಯರೊಬ್ಬರ ನಿಶ್ಚಿತಾರ್ಥಕ್ಕೆ ಹಂಪೆಗೆ ಹೋಗಿದ್ದೆ. ಬೆಂಗಳೂರಿಂದ ಹೋಗಿ ಬಸ್ಸಿಳಿದು ಹೋಟೆಲ್ ನಲ್ಲಿ ರೂಮು ಹಿಡಿದೆ. ಅದೇ ಹೋಟೆಲ್ ನಲ್ಲಿ ಇತರ ಕೆಲವು ಸ್ನೇಹಿತರೂ ರೂಮು ಮಾಡಿದ್ದರು. ಮರುದಿನ ಎಲ್ಲರೂ ಒಟ್ಟಿಗೆ ಚೆಕ್ಔಟ್ ಮಾಡುವಾಗ ಗೊತ್ತಾಯಿತು, ನನಗೆ ಮಾತ್ರ ಜಾಸ್ತಿ ರೇಟು ಹೇಳಿದ್ದರೆಂದು. ದಬಾಯಿಸಿದಾಗ receptionist ಹೇಳಿದ ‘ಮೇಡಂ, ನೀವು foreigner ಅಂದ್ಕೊಂಡು ಜಾಸ್ತಿ ಹೇಳಿದ್ವಿ’ ಎಂದು. ಹೆಚ್ಚುವರಿ ದುಡ್ಡನ್ನು ಪೀಕಿಸಿಕೊಂಡು ಬಂದೆ. ಇದು ವರ್ಣಬೇಧ ನೀತಿಯಲ್ಲದೇ ಇನ್ನೇನು?! ಹಲವು ಪ್ರವಾಸೀ ತಾಣಗಳಲ್ಲಿ ವಿದೇಶೀಯರಿಗೆ ಎಂಟ್ರಿ ಫೀಸ್ ಹೆಚ್ಚು ಇರುವುದರಿಂದ ಅಲ್ಲಿಯೂ ಜಗಳವಾಡಬೇಕಾಗುತ್ತದೆ!! ಕರ್ನಾಟಕದಲ್ಲೇನೋ ಕನ್ನಡದಲ್ಲಿ ಮಾತಾಡಿ ನಿಭಾಯಿಸುತ್ತೇನೆ. ಆದರೆ ಬೇರೆ ರಾಜ್ಯಗಳಿಗೆ ಹೋದಾಗ ನನ್ನ ಪರಿಸ್ಥಿತಿ ದೇವರಿಗೇ ಪ್ರೀತಿ. ಸರಿಯಾಗಿ ಹಿಂದಿಯೂ ಬಾರದ ನಾನು ಭಾರತೀಯಳೆಂದು ನಿರೂಪಿಸಲು ಹರಸಾಹಸ ಪಡಬೇಕು. ಹರಕು-ಮುರುಕು ಹಿಂದಿ ಮಾತಾಡಿ ನನಗೆ ಮಾತ್ರ ಸ್ಪೆಷಲ್ ಆಗಿ ಹೇಳಿದ ಯಾವುದೇ ವಸ್ತುವಿನ ರೇಟು ಕಮ್ಮಿ ಮಾಡಿಸಲು ಗುದ್ದಾಡಬೇಕು.

ಈಗ ಎಂಟು ವರ್ಷಗಳ ಹಿಂದೆ ಒಂದು conference ಗೆ ಚೆನ್ನೈ ಗೆ ಹೋಗಿದ್ದೆ. ತಿರುಗಿ ಬೆಂಗಳೂರಿಗೆ ಬರುವಾಗ ಬೆಳಗಿನಜಾವ ರೇಲ್ವೇ ಸ್ಟೇಷನ್ ಗೆ ಬಂದು ನನ್ನ ಲಗೇಜ್ ನ್ನು ಕಷ್ಟಪಟ್ಟು ಹೊತ್ತುಕೊಂಡು platform ಕಡೆ ನಡೆಯುತ್ತಿದ್ದೆ. ಧುತ್ತನೇ ಒಬ್ಬ ಯುವಕ ಬಂದು ನನ್ನ ಲಗೇಜ್ ಗೆ ಕೈ ಹಾಕಿದ. “May I help you madam? Where are you going?” ಎಂದ. ತಮಿಳು ಬರದ ನಾನು ಇಂಗ್ಲಿಷ್ ನಲ್ಲೇ ಉತ್ತರಿಸಿದಾಗ ಬೆಂಗಳೂರು ರೈಲಿನ platform ತೋರಿಸುತ್ತೇನೆಂದು ನನ್ನ ಲಗೇಜ್ ಹೊತ್ತು ನಡೆಯತೊಡಗಿದ. ಹೀಗೆ ಪುಕ್ಕಟೆ ಸಿಕ್ಕ educated ಹಮಾಲಿ(!) ಚೆನ್ನೈ ಗೆ ಬಂದಿದ್ದು ಯಾಕೆ ಏನು ಎತ್ತ ಎಲ್ಲ ವಿಚಾರಿಸಿ “Now, why are you going to Bangalore?” ಅಂದ. “Because, I stay in Bangalore” ಎಂದೆ. “Basically, which place are you from?” ಅಂತೂ ವಿಷಯಕ್ಕೆ ಬಂದ!! ಶಿರಸಿ ಎಂಬ ಊರಿನ ಹೆಸರು ಅವನಿಗೆ ಗೊತ್ತಿರಲು ಸಾಧ್ಯವಿಲ್ಲ ಎನ್ನಿಸಿ “I am from Bangalore only” ಅಂದೆ. ತುಸು ಕಸಿವಿಸಿಗೊಂಡ ಆತ “No, I mean, which country are you from? Germany? US?” ಎಂದು ಕೇಳಿದ. ನಾನು ಜೋರಾಗಿ ನಗುತ್ತ “I am an Indian. I am a Kannadiga. From Karnataka only” ಎಂದೆ. ದುರುಗುಟ್ಟಿ ನೋಡಿದ ಆತ ತಕ್ಷಣ ನನ್ನ ಲಗೇಜ್ ಕೆಳಗಿಳಿಸಿ “platform is that side” ಎಂದು ಕೈತೋರಿ ಹೊರಟೇ ಹೋದ! ಇದಕ್ಕಿಂತ ಅವಮಾನ ಬೇಕೇ? :( ಆತ ನಾನೊಬ್ಬಳು ಬಿಳಿ ತೊಗಲಿನ ವಿದೇಶೀ ಹುಡುಗಿ ಎಂದು ಹಲ್ಕಿರಿದುಕೊಂಡು ಸಹಾಯ ಮಾಡಲು ಬಂದಿದ್ದು ಅಷ್ಟೇ… ಭಾರವಾದ ಲಗೇಜ್ ಹೊತ್ತು ಕಷ್ಟಪಡುತ್ತಿರುವವಳು ಎಂದಲ್ಲ. ಒಬ್ಬ ಫಾರಿನ್ ಹುಡುಗಿ ಜೊತೆ ಮಾತಾಡಿದೆ ಎಂದು ತನ್ನ ಗೆಳೆಯರ ಮುಂದೆ ಪೋಸು ಕೊಡಬಹುದಾಗಿದ್ದ ಸುವರ್ಣಾವಕಾಶ ತಪ್ಪಿ ಹೋದ ವ್ಯಥೆ, ಮೋಸಹೋದ ಭಾವ ಅವನಲ್ಲಿ ವ್ಯಕ್ತವಾಯಿತು. ಅವನ ಹತಾಶೆ ಆತ ನನ್ನ ಲಗೇಜ್ ನೆಲಕ್ಕೆ ಕುಕ್ಕಿ ತಿರುಗಿಯೂ ನೋಡದೆ ಹೋದ ವೇಗದಲ್ಲೇ ನನಗರ್ಥವಾಯಿತು. But, mistake was not mine!!

meಸಾಮಾನ್ಯವಾಗಿ ನಾನು ಅತೀ ಹೆಚ್ಚು ಮುಜುಗರಕ್ಕೊಳಗಾಗುವುದು ಯಾವುದಾದರೂ ಪಾರಂಪರಿಕ ಪ್ರವಾಸೀ ಸ್ಥಳಗಳಿಗೆ ಹೋದಾಗ. ಬಾದಾಮಿ, ಐಹೊಳೆ, ಹಂಪೆ, ಬೇಲೂರು ಇಂಥ ಕಡೆ ಹೋದಾಗಲೆಲ್ಲ ನಾನು ಕಸಿವಿಸಿ ಅನುಭವಿಸಿದ್ದೇನೆ. ಕ್ಯಾಮೆರಾ ಹಿಡಿದು ನಾನು ಫೋಟೋ ತೆಗೆಯುತ್ತಿದ್ದರೆ ಬೇರೆ ಜನ ನಿಂತು ನನ್ನನ್ನು ನೋಡುತ್ತಿರುತ್ತಾರೆ. ಬಿಸಿಲಿಗೆಂದು ಕೂಲಿಂಗ್ ಗ್ಲಾಸೋ, ಟೋಪಿಯೋ ಧರಿಸಿದ್ದರಂತೂ ಮುಗಿದೇ ಹೋಯಿತು. ನನ್ನ ಕೈಬಳೆಗಳಾಗಲೀ, ಹಣೆಯ ಕುಂಕುಮ ವಾಗಲೀ, ಮೂಗುಬೊಟ್ಟಾಗಲೀ  ನಾನೊಬ್ಬಳು ಭಾರತೀಯಳೆಂದು ಸಾರಲು ಸಹಾಯ ಮಾಡುವುದಿಲ್ಲ. ಇತ್ತೀಚಿಗೆ ವಿದೇಶೀಯರೂ ಬಳೆ – ಕುಂಕುಮ ತೊಟ್ಟು ಸೀರೆಯುಟ್ಟು ಓಡಾಡುವುದು ನನ್ನ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ!!  ದೊಡ್ಡವರು ದೂರದಲ್ಲೇ ನಿಂತು ನೋಡಿದರೆ ಚಿಕ್ಕ ಮಕ್ಕಳ ವರ್ತನೆ ಇನ್ನೂ ವಿಚಿತ್ರ. ಶಾಲಾ ಪ್ರವಾಸಕ್ಕೆ ಬಂದ ಮಕ್ಕಳಲ್ಲಿ ಯಾರೋ ಒಬ್ಬ ಧೈರ್ಯ ಮಾಡಿ ನನ್ನ ಬಳಿ ‘ಹಾಯ್’ ಎನ್ನುತ್ತಾನೆ. ತಿರುಗಿ ‘ಹಾಯ್’ ಎಂದರೆ ‘What is your name?’ ಎನ್ನುವುದು ಮುಂದಿನ ಪ್ರಶ್ನೆ. ಆಗತಾನೇ ಇಂಗ್ಲಿಷ್ ಕಲಿಯಲು ಆರಂಭಿಸುತ್ತಿರುವ 6-7 ನೇ ಕ್ಲಾಸಿನ  ಮಕ್ಕಳು ಹಾಗೆ ಕೇಳುವುದು ಮೋಜೆನಿಸುತ್ತದೆ. ಮೊದಮೊದಲು ನಾನು ಶುದ್ಧ ಕನ್ನಡದಲ್ಲಿ “ನನ್ನ ಹೆಸರು ಚೇತನಾ. ಯಾಕೆ ಇಂಗ್ಲಿಷ್ ನಲ್ಲಿ ಮಾತಾಡ್ತೀಯಾ? ನಾನು ಕನ್ನಡದವಳೇ” ಎನ್ನುತ್ತಿದ್ದೆ. ಆಗೆಲ್ಲ ಉಳಿದವರು ಜೋರಾಗಿ ನಕ್ಕು ಮಾತಾಡಿಸಿದ ಹುಡುಗ/ಹುಡುಗಿ ಅವಮಾನಕ್ಕೊಳಗಾಗುತ್ತಿದ್ದರು. ಪಾಪ ಎನ್ನಿಸಿ ಇತ್ತೀಚಿಗೆ ಇಂಗ್ಲಿಷ್ ನಲ್ಲಿಯೇ ಉತ್ತರಿಸಿ ಬರುತ್ತೇನೆ. “My name is Chetana” ಎಂದರೆ ‘ಚೇತನಾ’ ಎನ್ನುವುದು ವಿದೇಶೀ ಹೆಸರು ಹೌದೋ ಅಲ್ಲವೋ ಎಂಬ confusion ಗೆ ಒಳಗಾಗಿ ಸುಮ್ಮನೇ ಹೋಗುತ್ತವೆ ಮಕ್ಕಳು!! ಇತ್ತೀಚಿಗೊಮ್ಮೆ ಕೇರಳಕ್ಕೆ ಹೋದಾಗ ಶಾಲಾ ಮಕ್ಕಳು ಮಾತ್ರವಲ್ಲದೇ ಅವರ ಲೇಡಿ ಟೀಚರ್ ಕೂಡ “which country?” ಎಂದು ಕೇಳಿ ಪೆಚ್ಚಾಗಿ ಹೋಗಿದ್ದಳು!!

ಒಮ್ಮೆ ರಂಗನತಿಟ್ಟಿಗೆ ಹೋದಾಗ ನಾನು ಜೀನ್ಸ್ – ಟಾಪ್ ತೊಟ್ಟು ಕೂಲಿಂಗ್ ಗ್ಲಾಸ್ with ಹ್ಯಾಟ್ ವೇಷದಲ್ಲಿದ್ದೆ. ನಾನು ಮತ್ತು ನನ್ನ ಗಂಡ ಬೋಟಿಂಗ್ ಮುಗಿಸಿ ಈಚೆ ಬರುತ್ತಿರುವಾಗ ಎದುರಿಗೆ 3-4 ಯುವಕರು ಬಂದರು. 26-28 ವಯಸ್ಸಿನ ಆಸುಪಾಸಿನಲ್ಲಿದ್ದ ಅವರಲ್ಲೊಬ್ಬ sudden ಆಗಿ ನನ್ನ ಗಂಡನ ಬಳಿ “ಸರ್, ಏಕ್ ಫೋಟೋ ಮೇಡಂ ಕೀ ಸಾಥ್, ಪ್ಲೀಸ್ ” ಅಂದ! ನನಗೆ ಏನು ನಡೆಯುತ್ತಿದೆ ಎಂದು ಅರಿವಾಗುವುದರೊಳಗೆ ಪರಮ ಭೋಳೆಶಂಕರನಾದ ನನ್ನ ಗಂಡ ‘why not’ ಎಂದಿದ್ದೂ, ಆತ ತಕ್ಷಣ ನನ್ನ ಪಕ್ಕ ಬಂದು ನಿಂತು ಹಲ್ಕಿರಿದದ್ದೂ, ಅವನ ಸ್ನೇಹಿತರಲ್ಲೊಬ್ಬ ಫೋಟೋ ಕ್ಲಿಕ್ಕಿಸಿದ್ದೂ ಕ್ಷಣಮಾತ್ರದಲ್ಲಿ ನಡೆದು ಹೋಯಿತು!! ನಾನು ನನ್ನ ಗಂಡನಿಗೆ ಬೈಯತೊಡಗಿದೆ. ಆಗ ನನ್ನ ಗಂಡ ಅವರ ಬಳಿ ನಗುತ್ತ ಹಿಂದಿಯಲ್ಲಿ “ವೋ ಪರದೇಸೀ ನಹೀ ಹೈ.. ದೇಸೀ ಹೀ ಹೈ” ಎಂದಾಗ ಇಂಗು ತಿಂದ ಮಂಗನಂತಾದ ಅವರು ಜಾಗ ಖಾಲಿ ಮಾಡಿದರು! ಯಾವುದೋ ಗಂಡಸಿಗೆ ಹೆಂಡತಿ ಜೊತೆ ಫೋಟೋ ತೆಗೆಸಿಕೊಳ್ಳಲು ಅನುಮತಿ ನೀಡಿದ ಪ್ರಪಂಚದ ಏಕೈಕ ಗಂಡ ನೀವೇ ಇರಬೇಕು ಅಂದು ನಾನು ಇಂದಿಗೂ ನನ್ನ ಗಂಡನನ್ನು ಕಿಚಾಯಿಸುತ್ತಿರುತ್ತೇನೆ!!  “ಯಾವುದೋ ವಿದೇಶೀ ಹುಡುಗಿಯನ್ನು ಪಟಾಯಿಸಿದ್ದಾನೆ ಈತ” ಎಂಬಂತೆ ಎಲ್ಲರೂ ನನ್ನ ಗಂಡನನ್ನೂ ನೋಡುವುದು ಇವರಿಗೆ ಮೋಜಿನ ವಿಷಯ!!

ದೇವಸ್ಥಾನಗಳಿಗೆ ಹೋದಾಗ ಇನ್ನೊಂದು ಬಗೆಯ ಕಷ್ಟ. ಜೊತೆಯಲ್ಲಿದ್ದವರ ಬಳಿ ಅರ್ಚನೆ ಮಾಡಿಸಲು ವಿವರ ಕೇಳುವ ಅರ್ಚಕರು ನನ್ನ ಬಿಳಿ ಮೂತಿ ನೋಡಿ ಸುಮ್ಮನಾಗುತ್ತಾರೆ. ನಾನೇ ಮುಂದಾಗಿ ರಾಶಿ-ನಕ್ಷತ್ರ-ಗೋತ್ರ ಎಲ್ಲ ಹೇಳಿದಾಗ ದಂಗಾಗುತ್ತಾರೆ! ಪ್ರಸಾದ ಕೊಡಲು ಹಿಂದೆ-ಮುಂದೆ ನೋಡುವವರೂ, ಹೂವು-ತೀರ್ಥ ಕೊಟ್ಟು ಅದನ್ನು ಏನು ಮಾಡಬೇಕೆಂದು ನನಗೆ ತಿಳಿಸಿ ಹೇಳಲು ಪ್ರಯತ್ನಿಸುವವರೂ ಇದ್ದಾರೆ!! ಮೊದಮೊದಲು ಪರ ಊರಿನ ದೇವಸ್ಥಾನಗಳಿಗೆ ಹೋದಾಗ ಅರ್ಚನೆಯೋ ಮಹಾ ಮಂಗಳಾರತಿಯೋ ನಡೆಯುವ ಸಮಯದಲ್ಲಿ ಅರ್ಚಕರು ಮಂತ್ರ ಹೇಳುತ್ತಿದ್ದರೆ ಸಾಕಷ್ಟು ಮಂತ್ರಗಳು ಗೊತ್ತಿರುವ ನಾನೂ ಅವರೊಂದಿಗೆ ದನಿಯಾಗುತ್ತಿದ್ದೆ. ಅಥವಾ ಪ್ರದಕ್ಷಿಣೆ ಹಾಕುವಾಗ ನನ್ನಷ್ಟಕ್ಕೆ ನಾನೇ ಮಂತ್ರ ಹೇಳಿಕೊಳ್ಳುತ್ತಿದ್ದೆ. ಆದರೆ ಆಘಾತಗೊಂಡ ಅರ್ಚಕರು ದೇವರನ್ನು ಬಿಟ್ಟು ನನ್ನನ್ನು ನೋಡುವುದನ್ನು ಗಮನಿಸಿ ಅಪ್ಪಿ-ತಪ್ಪಿ ಅವರುಗಳಿಗೆ ಹಾರ್ಟ್ ಅಟ್ಯಾಕ್ ಆಗಿ ಒಂದು ಜೀವ ತೆಗೆದ ಪಾಪ ನನಗೇಕೆ ಎಂದು ಇತ್ತೀಚಿಗೆ ಬಾಯಿಬಿಟ್ಟು ಮಂತ್ರ ಹೇಳುವುದನ್ನು ಬಿಟ್ಟಿದ್ದೇನೆ!!

ಇಂಥ ಎಲ್ಲ ಘಟನೆಗಳಿಗೆ ಕಳಶಪ್ರಾಯವಾದ ಘಟನೆ ಎಂದರೆ ಮದುವೆಯಾಗಿ ಕೆಲವು ತಿಂಗಳ ಬಳಿಕ ನಾವು ಮ್ಯಾರೇಜ್ ರಿಜಿಸ್ಟ್ರೇಷನ್ ಮಾಡಿಸಲು sub-registrar ಆಫೀಸ್ ಗೆ ಹೋದಾಗ. ಅಪ್ಲಿಕೇಶನ್ ಫಾರಂ, ಮದುವೆ ಫೋಟೋ, ಇನ್ವಿಟೇಶನ್ ಕಾರ್ಡ್ ಇತ್ಯಾದಿ ಎಲ್ಲ ಕೊಟ್ಟು ಕಾಯುತ್ತಿದ್ದೆವು. ಅಲ್ಲಿಯ ಕ್ಲರ್ಕ್ ಮ್ಯಾರೇಜ್ ಸರ್ಟಿಫಿಕೇಟ್ ಗೆ ಬೇಕಾದ ಎಲ್ಲಾ ಫಾರ್ಮಾಲಿಟಿ ಮುಗಿಸಿ ಪ್ರಿಂಟ್ ತೆಗೆಯುವ ಮುನ್ನ ಹೆಸರು, ವಿವರ ಇತ್ಯಾದಿ ಎಲ್ಲ ಸರಿಯಾಗಿದೆಯೇ ಎಂದು ಕಂಪ್ಯೂಟರ್ ನಲ್ಲಿ verify ಮಾಡಲು ಹೇಳಿದ. ನಾವು ಅದನ್ನು ಓದಿ ಎಲ್ಲ ಸರಿ ಇದೆ ಎಂದ ಮೇಲೂ ಆತ “ಇನ್ನೊಮ್ಮೆ ನೋಡಿ. ಒಮ್ಮೆ ಪ್ರಿಂಟ್ ತೆಗೆದ ಮೇಲೆ ಮತ್ತೆ ಏನಾದರೂ ತಪ್ಪಿದೆ ಎಂದು ಹೇಳಬಾರದು” ಎಂದ. ಮತ್ತೆ ನಾವು ಸರಿ ಇದೆ. ಪ್ರಿಂಟ್ ತೆಗೆಯಬಹುದು ಎಂದೆವು. ಆತ ಆಗ ಅನುಮಾನಿಸುತ್ತ ನನ್ನ ಮುಖ ಮತ್ತೆ ಮತ್ತೆ ನೋಡಿ ನನ್ನ ಗಂಡನ ಕಡೆ ತಿರುಗಿ “ಇದು ಹಿಂದೂ ಮ್ಯಾರೇಜ್ ಆಕ್ಟ್ ಪ್ರಕಾರವೇ ಹೌದು ತಾನೇ?” ಎಂದ!! ನಮಗೆ ನಗು ತಡೆಯಲಾಗಲಿಲ್ಲ! ಯಾವಾಗಲೂ ಬಳೆ-ಕುಂಕುಮ ತೊಟ್ಟು ಸಾಧ್ಯವಾದ ಕಡೆಯೆಲ್ಲ ಕನ್ನಡದಲ್ಲೇ ಮಾತಾಡಿದರೂ ಜನರಿಗೆ ನನ್ನ ಮೇಲೆ ಅನುಮಾನ ಹೋಗುವುದಿಲ್ಲ. ಇದಕ್ಕಿಂಥ ದೌರ್ಭಾಗ್ಯ ಉಂಟೇ?

ಹೀಗೆ ವಿವಿಧ ರೀತಿಗಳಲ್ಲಿ ನಮ್ಮ ದೇಶದಲ್ಲಿಯೇ ದಿನನಿತ್ಯ ಬಿಳಿ ಬಣ್ಣದಿಂದ ಕಿರಿಕಿರಿಗೊಳಗಾಗುತ್ತಿರುವವಳು ನಾನು. ಒಂಥರಾ ವಿಚಿತ್ರ ರೇಸಿಸಂ!! ಪ್ರತೀ ಘಟನೆಯ ಸಂದರ್ಭದಲ್ಲೂ ನನಗೆ ನಮ್ಮವರ ಮನಸ್ಥಿತಿಯ ಬಗ್ಗೆ ಖೇದವೆನಿಸುತ್ತದೆ. ಬೆಳ್ಳಗಿರುವುದು ಶ್ರೇಷ್ಠ ಎಂಬುದು ಸಾರ್ವತ್ರಿಕ ಭ್ರಮೆ. ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟೀಷರಲ್ಲಿ ನಮಗಿದ್ದ ದಾಸ್ಯ ಮನೋಭಾವದ ಸಂಕೇತ. ಒಂದೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರೂ ಒಂದು ಪರಿಚಯದ ನಗೆ ಬೀರಲು ಅನುಮಾನಿಸುವ ಜನ ಬಿಳಿ ತೊಗಲು ಕಂಡಾಕ್ಷಣ ಹಲ್ಕಿರಿಯುತ್ತಾರೆ. ಪರಿಚಯ/ಸ್ನೇಹ ಮಾಡಿಕೊಳ್ಳಲು ಹಾತೊರೆಯುತ್ತಾರೆ. ನನ್ನನ್ನು ವಿದೇಶೀಯಳು ಎಂದುಕೊಂಡು ಮಾತಾಡಿಸಲು ಬಂದ ಪ್ರತಿಯೊಬ್ಬರೂ ನಾನು ‘ದೇಸೀ’ ಎಂದು ತಿಳಿದ ತಕ್ಷಣ ತೋರಿಸುವ ಹತಾಶೆ/ಜಿಗುಪ್ಸೆಯ ಮುಖಭಾವ ನನಗರ್ಥವಾಗುತ್ತದೆ. ಅದು ತುಂಬ ಅಸಹನೀಯ. ಎಲ್ಲರಿಂದ ಬೇರೆ ಎಂಬ ಪ್ರತ್ಯೇಕತೆಯ ಹಿಂಸೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಎಲ್ಲರ priority ಕೇವಲ ಬಿಳಿ ಬಣ್ಣ. ಯಾರೋ ಅತೀ ಕಪ್ಪು ಇರುವವರನ್ನು ‘ಆಫ್ರಿಕನ್’ ಎಂದುಕೊಂಡಾದರೂ ನಮ್ಮವರು ಮಾತನಾಡಿಸುವುದಿಲ್ಲ. ಫೋಟೋ ತೆಗೆಸಿಕೊಳ್ಳಲು ಮುಂದಾಗುವುದಿಲ್ಲ. ನಿಜವಾದ ಆಫ್ರಿಕನ್ನೇ (ಅಥವಾ ಯಾವುದೇ ದೇಶದ ಕಪ್ಪು ವರ್ಣೀಯರು) ಎದುರಾದರೂ ನಮ್ಮವರು ಮೂಸಿಯೂ ನೋಡುವುದಿಲ್ಲ. ಅಂದರೆ ಸ್ವತಃ ನಾವು ಭಾರತೀಯರು ಕಪ್ಪು – ಗೋಧಿ ಬಣ್ಣದವರಾದರೂ ಕಪ್ಪಿನ ಬಗ್ಗೆ ಅದೆಂಥ ಕೀಳು ಮನೋಭಾವ ಹೊಂದಿದ್ದೇವೆ ಎಂಬುದು ವಿದಿತವಾಗುತ್ತದೆ. ಇದಕ್ಕಿಂತ ವೈಪರೀತ್ಯವಿದೆಯೇ? ವರ್ಣಬೇಧ ನೀತಿ ಇರುವ ದೇಶಗಳಲ್ಲಿ ಒಬ್ಬ ಕಪ್ಪುವರ್ಣೀಯ ಇನ್ನೊಬ್ಬ ಕಪ್ಪುವರ್ಣೀಯನನ್ನು  ದೂರವಿಡುವುದಿಲ್ಲ. ಆದರೆ ನಮ್ಮಲ್ಲಿ ಹಾಗಲ್ಲ. ಕಪ್ಪಗಿರುವವನಿಗೂ ಬಿಳಿ ಬಣ್ಣದವರೇ ಇಷ್ಟ! ಮತ್ತು ಕಪ್ಪು ಕಷ್ಟ – ಕಷ್ಟ!!

15-18 ವರ್ಷಗಳ ಕಾಲ ನಟರಾಜ ಸರ್ವಿಸ್ ನಲ್ಲೇ ಶಾಲಾ-ಕಾಲೇಜು ಮುಗಿಸಿದರೂ ನಯಾಪೈಸೆ ಬಣ್ಣ ಕಡಿಮೆಯಾಗದ ನನಗೆ ಈ ಥರದ ರೇಸಿಸಂ ನಿಂದ ಮುಕ್ತಿ ಇಲ್ಲ ಎಂಬ ಅರಿವಿದೆ. ಮತ್ತು ಇಂಥ ಹೊಸ ಹೊಸ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರಬೇಕು ಎಂಬುದು ಗೊತ್ತಿದೆ!!

ಅಂದ ಹಾಗೆ ಹಿಂದಿ ಬಾರದ ದಕ್ಷಿಣ ಭಾರತೀಯಳಾದ ನನಗೆ ಯಾವತ್ತೋ ಒಂದು ದಿನ ತರುಣ್ ವಿಜಯ್ ಸಿಕ್ಕು ನನ್ನ ಬಳಿ ಬಂದು ಹಲ್ಕಿರಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದೇ ಎಂದು ಕಾಯುತ್ತಿದ್ದೇನೆ!!

Edited version of this article is published in a Kannada Daily Vishwavani on 30th April 2017.

http://epaper.vishwavani.news/bng/e/bng/30-04-2017/13

 

 

This entry was posted in ಭಾವಲೋಕ...!!!. Bookmark the permalink.

9 Responses to ರೇಸಿಸಂನ ಬಲಿಪಶುವೊಬ್ಬಳ ಕಥೆ-ವ್ಯಥೆ!!

 1. Shwetha says:

  I am so proud to be your student Ma’am.
  Nange ansittu nimage ee tara ghatanegalu agirabahudu endu. Aadare ishtondu anta ansiralilla.
  Baraha tumba channagide. ☺️

 2. prasanna says:

  mam, In 1st sem, very first day and very first class was yours, even I thought the same thing that you are from north India or from other country, I was thinking how to ask doubt and all, because I was not knowing English properly. And very next day I saw Bhitti novel in your cabin then only I came to know you are also from Karnataka.

  Anyway, mam very nice Article

 3. Prafful V H says:

  Videshiyara bagge adhikavada gaurava, haage ondu reetiya vyamoha namma janaralli tumba munche indanu ide, itihasadalli raja maharajaru avara banna, uduge toduge ee thara tumbane vishayada bagge ati hechu kotoohala torisidare matte nammana avariginta eno kadime anno keelarime belasikondu nooraru varsha avara doirjanya sahisidare. Adre 21 ne shatamana ella modernize agiro samaya (uduge toduge, vyasana bitre bere olle vicharagalu enu hechu alavadisikondila ) intaha samayadallu neevu heliro hage estondu vichitra jana irtare andre acchari haage aghata yearadu agate madam. Neevu samaya samayadali estondu tondare anubhavisiddaru ade vishyana istu achukattagi vyakthapadisirodu nijakku shlaaganeeya ? article is definitely eye opener mam ? as usual .. please keep writing ??it may be academic book or a social one.

  • ChetanaHegde says:

   Thanks Prafful, ಇಷ್ಟು ದೊಡ್ಡ ಮೆಸೇಜ್ ಹಾಕೋವಾಗ ದಯವಿಟ್ಟು ಕನ್ನಡದಲ್ಲಿ ಬರೆಯೋ ಮಾರಾಯ.. ಭಾರಿ ಕಷ್ಟ ಈ ಕಂಗ್ಲಿಷ್ ಓದೋದು :(

 4. Ashok Gali says:

  Hi Chetana
  Good to read about your experience being / looking like foriegner!!!
  We never thought like that during our college days about you. Share few incidents where in you are treated as pakka Kannada girl.

  Thanks
  Ashok

  • ChetanaHegde says:

   Thanks Ashok :)
   I don’t remember even a single incident where some unknown people treated me as a Kannada girl!! Only known people starts talking to me in Kannada 😀

Leave a Reply

Your email address will not be published. Required fields are marked *