ಮಂದಾಕಿನಿ

ತನ್ನ ಹವಾನಿಯಂತ್ರಿತ ಕೊಠಡಿಯಲ್ಲಿ ಕೋಟ್ಯಾಧಿಪತಿ ಉದ್ಯಮಿ ಯಾಜಿ ಶತಪಥ ತಿರುಗುತ್ತಿದ್ದ. ಅವನ ಕರೆಗೆ ಓಗೊಟ್ಟು ಒಳಬಂದ ಭಾರದ್ವಾಜ. “ಮಿ. ಭಾರದ್ವಾಜ್, ನನಗೆ ಹುಚ್ಚು ಹಿಡಿಯುವುದೊಂದು ಬಾಕಿ. ನಮ್ಮ ಪ್ಲಾನ್ ಈ ರೀತಿ ಪರಿಣಾಮ ಉಂಟುಮಾಡುತ್ತದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಕ್ಷೋಭೆಯಿಂದ ಹೇಳಿದ ಯಾಜಿ. ಅವನ ಕೋಣೆಯ ತುಂಬೆಲ್ಲ ಸಾವಿರಾರು ಪತ್ರಗಳು, ಗಳಿಗೆಗೊಮ್ಮೆ ರಿಂಗಾಗುವ ಫೋನುಗಳು.

ಬಾಲ್ಯದಲ್ಲೇ ತಂದೆ-ತಾಯಿಗಳನ್ನೂ, ಪ್ರೀತಿಸುವ ಅಜ್ಜನನ್ನೂ ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿ ಬೆಳೆಯುತ್ತಿರುವ ಹುಡುಗ ಸೋಮಯಾಜಿ. ಮೃದುಮನಸ್ಸಿನ, ಭಾವುಕ ಸೋಮಯಾಜಿಗೆ ಕೊಡಬಾರದ ಕಷ್ಟಕೊಡುವ ನೆಂಟರು. ತುತ್ತು ಕೂಳಿಗೆ, ಶಾಲೆಯ ಫೀಸಿಗೆ ಪರದಾಡುತ್ತ, ತನ್ನತನವನ್ನೇ ಕಳೆದುಕೊಂಡು ಕೀಳರಿಮೆಯಿಂದ ಬಳಲುತ್ತಿರುವ ಸೋಮಯಾಜಿಗೆ ಚೈತನ್ಯ ತುಂಬಿದವಳು ನೆರೆಮನೆಯ ಹೆಂಗಸು ಮಂದಾಕಿನಿ. ಸೋಮಯಾಜಿಯೊಳಗೆ ಸುಪ್ತವಾಗಿದ್ದ ಶಕ್ತಿ, ಫುಟ್ಬಾಲ್ ಆಟದಲ್ಲಿ ಅವನಿಗಿರುವ ತಾಕತ್ತು ಎಲ್ಲವನ್ನೂ ಉದ್ದೀಪಿಸುವ, ಆತ್ಮವಿಶ್ವಾಸ ತುಂಬುವ ಧೀಮಂತ ಹೆಣ್ಣು ಮಂದಾಕಿನಿ. ಎಲ್ಲವೂ ಸರಿಹೋಗುತ್ತದೆ ಎನ್ನುವಾಗ ಇಬ್ಬರೂ ದೂರವಾಗುವ ಸಂದರ್ಭ ಒದಗುತ್ತದೆ. ಹೊರಡುವ ಮುನ್ನ “ನಿನ್ನ ಅಡ್ರೆಸ್ ಕೊಡು“ ಎಂದ ಸೋಮಯಾಜಿಗೆ ಆಕೆ ಕೊಟ್ಟಿದ್ದು ಒಂದು ಚೀಟಿ. ರೈಲು ಹೊರಟನಂತರ ಚೀಟಿ ನೋಡಿದ ಸೋಮಯಾಜಿಗೆ ಆಘಾತ. ಅದರಲ್ಲಿದ್ದುದು ಮಂದಾಕಿನಿಯ ಅಡ್ರೆಸ್ ಅಲ್ಲ, ಬದಲು “ನೀನು ಗೆಲ್ಲಬೇಕು, ಒಂದೊಂದೇ ಗೋಲ್ ಹೊಡೆಯುತ್ತ …ಜೀವನವೆಂಬ ಕಾಲ್ಚೆಂಡಿನಾಟದಲ್ಲಿ” ಎಂಬ ವಾಕ್ಯವಷ್ಟೇ.

ಅವಳ ಮಾತಿನಂತೆ ಜೀವನದಲ್ಲಿ ಬಹುಎತ್ತರಕ್ಕೆ ಬೆಳೆದು ವಯಸ್ಸು 50 ದಾಟಿದರೂ ಯಾಜಿಗೆ ಅವಳ ನೆನಪು ಮಾಸಿಲ್ಲ. ಅವಳನ್ನು ಹುಡುಕಲು ಆತ ಆಯ್ದುಕೊಂಡ ಮಾರ್ಗ – ಪ್ರಖ್ಯಾತ ಲೇಖಕ ಭಾರದ್ವಾಜನ ಬಳಿ ತನ್ನ ಕಥೆ ಬರೆಸಿ ಪತ್ರಿಕೆಯಲ್ಲಿ ಧಾರಾವಾಹಿಯಂತೆ ಪ್ರಕಟಿಸಿದ್ದು. ಕೊನೆಯಲ್ಲಿ ತನ್ನ ಅಡ್ರೆಸ್ ಹಾಗೂ ಫೋನ್ ನಂಬರ್ ಕೊಟ್ಟು ಸಂಪರ್ಕಿಸಲು ಮನವಿ ಮಾಡಿದ್ದು.

ಅಲ್ಲೇ ಆದದ್ದು ಎಡವಟ್ಟು. ಸಾವಿರಾರು ಜನ ಹುಡುಗಿಯರು/ಹೆಂಗಸರು ಇಡೀ ಕಥೆಯನ್ನು ತಮಗೆ ಬೇಕಾದಂತೆ ಅರ್ಥೈಸಿ ಪತ್ರ ಬರೆಯಲು/ಫೋನ್ ಮಾಡಲು ಶುರುವಿಟ್ಟರು. ಕನಲಿಹೋದ ಸೋಮಯಾಜಿ ಭಾರದ್ವಾಜನನ್ನೇ ಕರೆಸಿ ಈಗೇನು ಮಾಡುವುದೆಂದು ಸಂಕಟ ತೋಡಿಕೊಳ್ಳುವ ಸಂದರ್ಭ.ಅದೇ ಸಮಯಕ್ಕೆ ಫೋನ್ ಮತ್ತೆ ರಿಂಗಾಗುತ್ತದೆ. ರೋಸಿಹೋಗಿದ್ದ ಯಾಜಿ ತನ್ನ ಸೆಕ್ರೆಟರಿಗೆ ಕಾಲ್ ತೆಗೆದುಕೊಳ್ಳಲು ಹೇಳುತ್ತಾನೆ. ತಕ್ಷಣ ಅವನನ್ನು ತಡೆದ ಭಾರದ್ವಾಜ “ಮಂದಾಕಿನಿಗೆ ನೀನು ಇಷ್ಟು ದೊಡ್ಡ ಮನುಷ್ಯನಾಗಿರುವುದು ಗೊತ್ತಿಲ್ಲ. ಹಾಗಾಗಿ ನೀನೇ ಫೋನ್ ಅಟೆಂಡ್ ಮಾಡು” ಎನ್ನುತ್ತಾನೆ. ಯಾವುದೋ ಮೋಡಿಗೊಳಗಾಗಿ ಯಾಜಿ ಫೋನ್ ಎತ್ತಿದಾಗ ಅಲೆಅಲೆಯಾಗಿ ಕೇಳಿಬಂದ ವಾಕ್ಯ “ಸೋಮೂ ನೀನಾ?…”.

ಇದರೊಂದಿಗೆ ಯಂಡಮೂರಿ ವೀರೇಂದ್ರನಾಥರ ‘ಆನಂದೋಬ್ರಹ್ಮ’ ಕಾದಂಬರಿ ಮುಗಿಯುತ್ತದೆ. ಆದರೆ ಆ ಕೊನೆಯ ವಾಕ್ಯ ಓದಿದಾಗ ಆಗುವ ರೋಮಾಂಚನ ಕೇವಲ ಯಾಜಿ ಮತ್ತು ಭಾರದ್ವಾಜರದ್ದು ಮಾತ್ರವಲ್ಲ, ಓದುಗರದ್ದೂ ಕೂಡ!!  ಹೆಸರಿಗೆ ಅನ್ವರ್ಥವಾಗಿರುವ ಮಂದಾಕಿನಿಯ ಪಾತ್ರ ನನ್ನನ್ನು ಎಂದೆಂದೂ ಕಾಡುತ್ತದೆ.

(NOTE: A Kannada Daily Vishwavani asks readers to send a small article on a book/movie which has touched them deeply. The column is named as Prabhaava Chitra. The novel Aanandobramha is one of the best by Telugu writer Yendamuri Veerendranath.. I read this novel during my high school days and still cherish the essence of the novel. Hence, penned down few words.)

This article is published in Sunday supplement of Kannada daily Vishwavani on 20th August 2017.

This entry was posted in ಭಾವಲೋಕ...!!!. Bookmark the permalink.

Leave a Reply

Your email address will not be published. Required fields are marked *