ಕಾವೇರಿ = ಕನ್ನಡ/ಕನ್ನಡಿಗ?

ಈ ಪ್ರಶ್ನೆ ನನ್ನನ್ನು ಚಿಕ್ಕಂದಿನಿಂದಲೂ ಕಾಡಿದೆ. ಕಾರಣ ನಮ್ಮ ಸಿನಿಮಾಗಳು ಮತ್ತು ಅವುಗಳ ಹಾಡುಗಳು. ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಹಾಡು ಇದ್ದರೂ ಅದರಲ್ಲಿ ಕಾವೇರಿಯ ಉಲ್ಲೇಖ ಪಕ್ಕಾ. ಯಾಕೆ ಕಾವೇರಿ ನದಿಗೆ ಇಷ್ಟೊಂದು ಪ್ರಾಮುಖ್ಯತೆ ಎಂಬುದು ದೇವರಾಣೆಗೂ ಅರ್ಥವಾಗಿರಲಿಲ್ಲ.

ಸತ್ಯ ಹೇಳುತ್ತೇನೆ, ಅಪ್ಪಟ ಮಲೆನಾಡಾದ ಶಿರಸಿಯಲ್ಲಿ ಹುಟ್ಟಿ ಬೆಳೆದ ನನಗೆ ನೀರಿನ ಕೊರತೆ ಎಂಬುದು ಅಷ್ಟಾಗಿ ಕಾಡಿರಲಿಲ್ಲ. ಪ್ರತೀ ಮನೆಯೂ ಒಂದೊಂದು ಸಿಹಿನೀರಿನ ಬಾವಿ ಹೊಂದಿರುವುದು ವಿಶೇಷವೇ ಅಲ್ಲ. ಹಳ್ಳಿಗಳಲ್ಲಿ ಮನೆಯ ಹಿಂದುಗಡೆಯೇ ಗುಡ್ಡದಿಂದ ಇಳಿದು ಬರುವ ನೀರಿನ ಝರಿಗಳು ಬಹು ಸಾಮಾನ್ಯವಾಗಿದ್ದ ಕಾಲ. ಹಾಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿದ/ಹರಿಯುವ ನದಿಗಳಾದ ಅಘನಾಶಿನಿ, ಶರಾವತಿ, ಬೇಡ್ತಿ, ಕಾಳಿ, ವರದಾ ಮುಂತಾದ ಯಾವ ನದಿಯ ನೀರನ್ನೂ ಕುಡಿದು ಬೆಳೆದವಳಲ್ಲ ನಾನು… ಎಲ್ಲೋ ಪ್ರವಾಸಕ್ಕೆ ಹೋದಾಗ ಒಂದೆರಡು ಬೊಗಸೆ ನೀರು ಕುಡಿದದ್ದು ಬಿಟ್ಟು!!  ನನ್ನ PUC ಮುಗಿಯುವವರೆಗೂ ನಮ್ಮ ಮನೆಯಿದ್ದ ಬಡಾವಣೆಯಲ್ಲಿ ನಲ್ಲಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಆಮೇಲೆ 15-20 ಮನೆಗಳಿಗೆ ಒಂದರಂತೆ ಬೀದಿಯಲ್ಲಿ ನಲ್ಲಿ ವ್ಯವಸ್ಥೆ ಬಂತು. ಅದೂ ಕೂಡ ಶಿರಸಿಯ ಸಮೀಪ ಹರಿಯುವ ಕೆಂಗ್ರೆ ಹೊಳೆಯ ನೀರು!! ಬೇಸಿಗೆಯಲ್ಲಿ ಗಿಡಗಳಿಗೆ, ಬಟ್ಟೆ-ಪಾತ್ರೆಗಳಿಗೆ ಬಳಸುತ್ತಿದ್ದೆವು ಅಷ್ಟೇ. ಪೋಸ್ಟ್ ಗ್ರಾಜುಯೇಷನ್ ಗೆ  ಧಾರವಾಡಕ್ಕೆ ಹೋದಮೇಲೆ ಕುಡಿದದ್ದು ಹುಬ್ಬಳ್ಳಿಯ ಉಣಕಲ್ ಕೆರೆಯ ನೀರು!  ಬೆಂಗಳೂರಿಗೆ ಬಂದ ಮೇಲೆ ಬಾಡಿಗೆ ಮನೆ ಹುಡುಕುವಾಗ ಓನರ್ ಗಳೇ “ಕಾವೇರಿ ಮನೆಯೊಳಗೆ ಬರಲ್ಲ, ಆಚೆ ಇರೋ tap ನಲ್ಲಿ ಹಿಡ್ಕೋಬೇಕು” ಎಂದೋ, ಅಥವಾ “ಈ ಏರಿಯಾದಲ್ಲಿ ಕಾವೇರಿ ಬರಲ್ಲ “ ಎಂದೋ ಹೇಳುವಾಗ “ಅಯ್ಯೋ, ಕಾವೇರಿ ಯಾಕೆ ಬೇಕು?” ಎಂದುಕೊಂಡಿದ್ದೇ ಹೆಚ್ಚು. ಆಮೇಲೆ ಇಲ್ಲಿಯ ಬೋರೆವೆಲ್ ನೀರಿನ ಹಣೆಬರಹ ಗೊತ್ತಾದರೂ ಕಾವೇರಿ ನೀರು ಬರುವ ಸಮಯಕ್ಕೆ ಮನೆಯಲ್ಲಿರಲು ಆಗದಂಥ ಆಫೀಸ್ ಟೈಮ್ ನಿಂದಾಗಿ ಕಾವೇರಿ ನೀರು ಕುಡಿದದ್ದು ಅಷ್ಟರಲ್ಲೇ ಇದೆ. ಆದರೆ, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರ ಕಾವೇರಿಯ ಮೇಲಿನ ಅವಲಂಬನೆ ಅರ್ಥವಾಯಿತು.

ಆದರೂ ಸಹ ಕಾವೇರಿಯನ್ನು ಕನ್ನಡತನಕ್ಕೆ ಸಮೀಕರಿಸುವ ಕೆಲವು ಜನರ ಧೋರಣೆಯ ಬಗ್ಗೆ ನನ್ನ ವಿರೋಧವಿದೆ. ಬೀದರ್, ಗುಲ್ಬರ್ಗ, ಬಳ್ಳಾರಿಯಿಂದ ಹಿಡಿದು ಮೈಸೂರು, ಕೊಡಗು, ಚಾಮರಾಜನಗರಗಳವರೆಗೆ ಹಬ್ಬಿರುವ ಕರ್ನಾಟಕದ ಎಲ್ಲ ಜಿಲ್ಲೆಗಳ ಜನರೂ ಕಾವೇರಿ ನೀರನ್ನೇ ಕುಡಿಯುತ್ತಾರೆಯೇ? ಇಲ್ಲ ಎಂದ ಮಾತ್ರಕ್ಕೆ ಅವರೆಲ್ಲ ಕನ್ನಡಿಗರೇ ಅಲ್ಲವೇ? ತಲೆತಲಾಂತರದಿಂದ ಕರ್ನಾಟಕದಲ್ಲೇ ಹುಟ್ಟಿ, ಬೆಳೆದು ಕನ್ನಡ ಬಿಟ್ಟು ಬೇರೇನನ್ನೂ ಮಾತಾಡಲು ಬಾರದ ಅದೆಷ್ಟು ಕನ್ನಡಿಗರಿಲ್ಲ? ತುಂಗಾ, ಭದ್ರ, ಘಟಪ್ರಭಾ, ಮಲಪ್ರಭಾ, ಶರಾವತಿ, ಶಾಲ್ಮಲಾ, ಕಾಳಿ, ಅಘನಾಶಿನಿ, ನೇತ್ರಾವತಿ, ಕೃಷ್ಣಾ ಇವೆಲ್ಲ ಕರ್ನಾಟಕದಲ್ಲಿ ಹರಿಯುವ ನದಿಗಳಲ್ಲವೇ? ಆಯಾ ಭಾಗದ ಜನರು ಅವುಗಳ ಮೇಲೆಯೇ ಅವಲಂಬಿತರಾಗಿಲ್ಲವೇ? ಹಾಗಿದ್ದ ಮೇಲೆ ಉಳಿದೆಲ್ಲ ನದಿಗಳಿಗಿಂತ ಕಾವೇರಿಗೆ ಮಾತ್ರ ಯಾಕೆ ಪ್ರಾಶಸ್ತ್ಯ? ಕೇವಲ ಅಧಿಕಾರ ಕೇಂದ್ರವಾಗಿರುವ ಬೆಂಗಳೂರು ಮತ್ತು ಸಮೀಪದ ಮಂಡ್ಯ, ಮೈಸೂರುಗಳಿಗೆ ಆಸರೆಯೆಂದೇ? ನಾನೂ ಒಪ್ಪುತ್ತೇನೆ, ನಮ್ಮ ಜನರಿಗೇ ನೀರಿಲ್ಲದಿರುವಾಗ ಬೇರೆ ರಾಜ್ಯಕ್ಕೆ ನೀರು ಬಿಡುವುದರ ಬಗ್ಗೆ ಯೋಚಿಸಬೇಕು, ಸಮಸ್ಯೆ ಬಗೆಹರಿಸಬೇಕು. ಇದು ಪಕ್ಕಾ ಆಡಳಿತಾತ್ಮಕ ಸಮಸ್ಯೆ. ಯಾರೋ ಜನ ಸಾಮಾನ್ಯರು, ಸೆಲೆಬ್ರಿಟಿಗಳು ಕುಳಿತು ಮಾತಾಡಿದರೆ ಬಗೆಹರಿಯುವುದಿಲ್ಲ.  ಅಂದಮೇಲೆ ಕಾವೇರಿಯ ಪರವಾಗಿ ಮಾತಾಡದೇ ತಟಸ್ಥವಾಗಿರುವ ಜನರನ್ನು  ‘ಕನ್ನಡಿಗರೇ ಅಲ್ಲ’ ಅಥವಾ ‘ಕನ್ನಡ ದ್ರೋಹಿ’ ಎಂದೇಕೆ ಬಗೆಯಬೇಕು?

ಈಗ ಇದನ್ನೆಲ್ಲ ಬರೆಯಲು ಕಾರಣ – ಇತ್ತೀಚೆಗೆ ಜನಶ್ರೀ ಚಾನೆಲ್ ನವರು ನಟ/ನಿರ್ದೇಶಕ ಪ್ರಕಾಶ್ ರೈ ಬಗ್ಗೆ ಎಬ್ಬಿಸಿದ ಗದ್ದಲ. ಕಾವೇರಿಯ ಬಗ್ಗೆ ಅಭಿಪ್ರಾಯ ಕೇಳಿದ ನಿರೂಪಕಿಗೆ ಪ್ರಕಾಶ್ ಮೊದಲು ಸಮಾಧಾನದಲ್ಲೇ ಉತ್ತರಿಸಿದ್ದಾರೆ – “ ಇದು ಗಂಭೀರ ವಿಷಯ, ಚರ್ಚೆಗೆ ಇದು ವೇದಿಕೆಯಲ್ಲ” ಎಂದು.  ತಮ್ಮ ಸಿನಿಮಾದ ಪ್ರಮೋಷನ್ ಗೆ ಕಾರ್ಯಕ್ರಮ ಕೊಡಲು ಬಂದ ಅವರು ತಮ್ಮ ಕೆಲಸಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವುದು ಸಹಜ. ಅಷ್ಟಾಗಿಯೂ ನಿರೂಪಕಿ ಮತ್ತೆ ಮತ್ತೆ ಅದನ್ನೇ ಕೇಳಿದಾಗ ಅವರು ಸಿಟ್ಟಾದರು.  ಆದರೆ ಈ ಚಾನೆಲ್ ನವರು ಮಾಡಿದ್ದೇನು? “ಕಾವೇರಿ ನೀರು ಕುಡಿದ ಕನ್ನಡಿಗ ಪ್ರಕಾಶ್ ರೈ ಇಂದ ಕನ್ನಡಕ್ಕೆ ದ್ರೋಹ” ಎಂದು heading ಕೊಟ್ಟು ದಿನಗಟ್ಟಲೇ ಬ್ರೇಕಿಂಗ್ ನ್ಯೂಸ್, ಪ್ಯಾನೆಲ್ ಡಿಸ್ಕಶನ್ ಮಾಡಿ ತಾವೆಷ್ಟು ಚೀಪ್ ಎಂದು ತೋರಿಸಿಕೊಂಡರು. ಜನಶ್ರೀ ಹೆಡ್ ಆದ ಅನಂತ್ ಚಿನಿವಾರ್ ಅವರು “ಪ್ರಕಾಶ್ ಅಂಥ ಸೆಲೆಬ್ರಿಟಿ ನಮಗೆ ಸಿಕ್ಕಾಗಲೇ ನಾವು ಜವಾಬ್ದಾರಿಯುತ ಪ್ರಶ್ನೆ ಕೇಳಬೇಕು” ಅಂದು ಪತ್ರಿಕೆಯೊಂದರಲ್ಲಿ ತಮ್ಮನ್ನು ಸಮರ್ಥಿಸಿಕೊಂಡರು. ಹಾಗಿದ್ದರೆ, ನಿರೂಪಕಿ ಪ್ರಕಾಶ್ ಬಳಿ ಮಹದಾಯಿ ಬಗ್ಗೆ ಏಕೆ ಕೇಳಲಿಲ್ಲ? ಉತ್ತರ ಸ್ಪಷ್ಟ – ತಮಿಳಿನಲ್ಲೇ ಮೇಲೆಬಂದ ಪ್ರಕಾಶ್ ರನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ಉದ್ದೇಶ. ಪರ/ವಿರೋಧ ಏನೇ ಹೇಳಿದರೂ TRP ಗೋಸ್ಕರ ಏನೋ ಒಂದು ಪ್ಯಾನೆಲ್ ಡಿಸ್ಕಶನ್ ಮಾಡಲು ಸಿದ್ಧವಾಗಿಯೇ ಇದ್ದವರು ಚಾನೆಲ್ ನವರು.

ಜನಶ್ರೀಯವರು ಈ ವಿವಾದ ಎಬ್ಬಿಸಲು ಕೊಟ್ಟ heading ಬಗ್ಗೆಯೇ ನನಗೆ ತಕರಾರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು ಪ್ರಕಾಶ್ ರೈ. ಮತ್ತು ಅಲ್ಲಿ ಕಾವೇರಿ ನೀರು ಹರಿಯುವುದಿಲ್ಲ, ಕಾವೇರಿ ನೀರಿನ ಸಪ್ಲೈ ಕೂಡ ಇಲ್ಲ !! 1990-92ರ  ಸಮಯ. ‘ಗುಡ್ಡದ ಭೂತ’ ಧಾರಾವಾಹಿಯಿಂದ ಜನರಿಗೆ ಪ್ರಕಾಶ್ ರೈ ಮುಖ ಪರಿಚಯವಾಗಿತ್ತು ಅಷ್ಟೇ. ಆ ಸಮಯದಲ್ಲಿ ‘ಭವ್ಯ ಭಾರತ’ ಎಂಬ ಕನ್ನಡ ಸಿನಿಮಾದ ಶೂಟಿಂಗ್ ಶಿರಸಿಯಲ್ಲಿ ನಡೆಯುತ್ತಿತ್ತು. (ಎಷ್ಟು ಜನ ಈ ಚಿತ್ರದ ಹೆಸರು ಕೇಳಿದ್ದಾರೋ ಗೊತ್ತಿಲ್ಲ!).  ಪ್ರಭಾಕರ್, ವಿನಯಾ ಪ್ರಸಾದ್, ತಾರಾ, ಅವಿನಾಶ್ ಎಲ್ಲ ಇದ್ದ ಈ ಸಿನೆಮಾದಲ್ಲಿ ಪ್ರಕಾಶ್ ರೈ ಕೂಡ ಇದ್ದರು. ದೇವರಾಣೆ ಹೇಳುತ್ತೇನೆ – ನಮ್ಮ ಶಾಲೆಯ ಮುಂದೆಯೇ ನಡೆಯುತ್ತಿದ್ದ ಶೂಟಿಂಗ್ ನೋಡಲು ಸೇರುತ್ತಿದ್ದ ಜನರಿಗೆ (ನನ್ನನ್ನೂ ಸೇರಿಸಿ) ಆಕರ್ಷಣೆ ಪ್ರಭಾಕರ್, ತಾರಾ ಮತ್ತಿತರರೇ ಹೊರತು ಪ್ರಕಾಶ್ ಅವರನ್ನು ನೋಡುವವರೂ ಇರಲಿಲ್ಲ. ಅಂತ ಪರಿಸ್ಥಿತಿಯಲ್ಲಿದ್ದ ಅವರು ಸ್ವಂತ ಪ್ರತಿಭೆಯಿಂದ ಬೆಳೆದರು. ತಮಿಳು/ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಕನ್ನಡ ಚಿತ್ರರಂಗದಲ್ಲಿ ಅವರು ಸೈಕಲ್ ಹೊಡೆಯುತ್ತಿದ್ದ ದಿನಗಳಲ್ಲಿ ಈಗ ಬೊಬ್ಬೆ ಹಾಕುವ ಸಾ.ರಾ. ಗೋವಿಂದು ಅಥವಾ ಅವರಂಥ ‘ಉಟ್ಟು ಓರಾಟಗಾರರು’ ಎಲ್ಲಿದ್ದರು? ಈಗ ಬಾಯಿಗೆ ಬಂದಂತೆ ಮಾತನಾಡುವುದು ಹೊಟ್ಟೆಕಿಚ್ಚಲ್ಲದೇ ಇನ್ನೇನು? ಕನ್ನಡ ಸಿನೆಮಾದಲ್ಲಿ ಚಿಕ್ಕ-ಪುಟ್ಟ role ಗಳಲ್ಲಿ ಅಭಿನಯಿಸುವಾಗ ಬೆಂಗಳೂರಿನ ಬಾಡಿಗೆ ಮನೆಯಲ್ಲಿ (ಸ್ವಂತ ಮನೆ ಮಾಡುವಷ್ಟು ದುಡ್ಡು ಖಂಡಿತಾ ಅವರ ಬಳಿ ಆಗ ಇದ್ದಿರಲಿಕ್ಕಿಲ್ಲ, ಬಿಡಿ) ಇರುವಷ್ಟು ಸಮಯ ಕಾವೇರು ನೀರು ಕುಡಿದಿರಬಹುದು ಪ್ರಕಾಶ್ ರೈ. ಅಥವಾ ನನ್ನಂತೆ ಅವರಿಗೆ ಕಾವೇರಿ ನೀರು ಬರುವ ಸಮಯ ಮಿಸ್ಸಾಗಿರಲೂಬಹುದು !! ಅಂದಮೇಲೆ “ಕಾವೇರಿ ನೀರು ಕುಡಿದ ಕನ್ನಡಿಗ” ಅವರು ಹೇಗಾದಾರು? ಕನ್ನಡಿಗರೆಲ್ಲ ಕಾವೇರಿ ನೀರೇ ಕುಡಿದಿರುತ್ತಾರೆಯೇ? ಅಥವಾ ಕಾವೇರಿ ನೀರು ಕುಡಿದವರು ಮಾತ್ರ ಕನ್ನಡಿಗರೇ? ಕಾವೇರಿ ನೀರು ಕುಡಿಯದ, ಮುದ್ದೆ-ಸಾರು ತಿನ್ನಲು ಬಾರದ ನನ್ನಂಥವರು ಕನ್ನಡಿಗರಾಗಲು ಅನರ್ಹರೆ? ಯಾಕೆ ಇಂಥ ಕುರುಡು ಪ್ರೇಮದ ಮೆಂಟಾಲಿಟಿ? ಕರ್ನಾಟಕ ರಾಜ್ಯದ ವಿಸ್ತಾರ ಇವರಿಗೆಲ್ಲ ತಿಳಿದೇ ಇಲ್ಲವೇ?

ಅಧಿಕಾರ ಕೇಂದ್ರಿತ ಸೀಮಿತ ಬುದ್ಧಿ/ತಿಳುವಳಿಕೆಯ ಇಂಥ ಜನ ಸಮಾಜದಲ್ಲಿ ಹೇಗೆ ಸ್ವಾಸ್ಥ್ಯ ಕೆಡಿಸುತ್ತಾರೆ ಎನ್ನುವುದಕ್ಕೆ ಈ ವಿವಾದವೇ ಸಾಕ್ಷಿ. ಪ್ರಕಾಶ್ ರೈ ಬಗ್ಗೆ ನನಗೆ ಸಹಾನುಭೂತಿಯಿದೆ. ಅವರ ಸಿನೆಮಾಗೆ ಗೆಲುವು ಸಿಗಲಿ. ಅವರಂಥ ಪ್ರತಿಭಾನ್ವಿತ ಕನ್ನಡಿಗರು ಇನ್ನಷ್ಟು ಹೆಸರು ಮಾಡಲಿ. ಕನ್ನಡವನ್ನು ಪಸರಿಸಲಿ.

This article is published by a Kannada website www.nilume.net

https://nilume.net/2016/10/10/%E0%B2%95%E0%B2%BE%E0%B2%B5%E0%B3%87%E0%B2%B0%E0%B2%BF-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97/

 

This entry was posted in ಭಾವಲೋಕ...!!!. Bookmark the permalink.

8 Responses to ಕಾವೇರಿ = ಕನ್ನಡ/ಕನ್ನಡಿಗ?

 1. H sriharsha says:

  ನಾನು ಇವತ್ತು ಪ್ರಕಾಶ್ ರೈ ಅವರ ಸಿನಿಮಾ ನೋಡಿದೆ ತಂಬ ಸೊಗಸಾಗಿ ಮೂಡಿ ಬಂದಿದೆ.
  ಇವರ ಬಗ್ಗೆ ಇನ್ನಷ್ಟು ಮಾಹಿತಿ ನನಗೆ ನಿಮ್ಮ ಲೇಖನದಿಂದ ಒದಗಿ ಬಂದಿತು.
  ಕಾವೇರಿ ನೀರಿನ ಮಹತ್ವವನ್ನು ತಂಬ ಚೆನ್ನಾಗಿ ವರ್ಣಿಸಿದ್ದೀರಿ madam.

 2. Raghav Basu says:

  ಸೊಗಸಾದ ಬರಹ…. ಹಾಗು ವಿಷಯ ಸಂಗ್ರಹಣೆ ತುಂಬ ಚೆನ್ನಾಗಿದೆ….

 3. Mamta says:

  I agree with ur opinion

 4. Siddu says:

  Mam.exactly this is happening… wonderful msg

 5. Basavaraj Katte S says:

  ಬಹಳ ಚೆನ್ನಾಗಿದೆ…

Leave a Reply

Your email address will not be published. Required fields are marked *