ಬಂಟ

ಕಪ್ಪಗಿದ್ದರೆ ಕರಿಯ, ಬೆಳ್ಳಗಿದ್ದರೆ ಬೆಳ್ಳಿ, ಸ್ವಲ್ಪ stylish ಆಗಿ ಬೇಕಿದ್ರೆ ಟೀಪೂ, ಟಾಮಿ… ನಾಯಿಗೆ ಇಡಬಹುದಾದ ಹೆಸರು ಇಷ್ಟೇ ಎಂದು ನಂಬಿದ್ದ ಶಿರಸಿಯಂಥ ಊರಿನಲ್ಲಿ ನವ ನಾವೀನ್ಯತೆ ಉಳ್ಳ ಹೆಸರಿನವನು ನಮ್ಮ ಬಂಟ. ಸಂಸ್ಕೃತದ ‘ಭಟ’ ಎಂಬ ಶಬ್ದದ ತದ್ಭವ ರೂಪ ಬಂಟ. ಅಂದರೆ ಸೇವಕ. ನಾಯಿ ಎಂದರೆ ನಾಯಿ ಮಾತ್ರ.. ಅದು ಬೆಕ್ಕಲ್ಲ ಅಥವಾ ಇನ್ನೇನೋ ಅಲ್ಲ ಎಂಬುದು ಮಾತ್ರ ತಿಳಿದಿದ್ದ, ಜರ್ಮನ್ ಶೆಫರ್ಡ್, ಪೊಮೇರಿಯನ್, ಲಾಬ್ರಡಾರ್ ಇತ್ಯಾದಿ ವಿವಿಧ ಬ್ರೀಡ್ ಇವೆ ಎಂಬುದನ್ನು ಕಂಡು ಕೇಳರಿಯದ ದಿನಗಳು ಅವು. ಇಡೀ ತಾಲೂಕಿಗೆ ಬೆರಳೆಣಿಕೆಯಷ್ಟು ಮನೆಗಳಲ್ಲಿ ಪೊಮೇರಿಯನ್ ಇತ್ತಾದರೂ ಎಲ್ಲರಿಗೂ ಅದು ಜೂಲುನಾಯಿ ಅಷ್ಟೇ !! ಜಾತಿ ನಾಯಿ ಅಲ್ಲದ, ಕೇವಲ ನಾಯಿ ಜಾತಿಯವನಾದ (ಇಂಡಿಯನ್ ಬ್ರೀಡ್ ಎಂದು ಈಗ ಕರೆಯಲ್ಪಡುವ ಜಾತಿ !!) ಬಂಟ ನಮ್ಮ ಮನೆಯ ಸದಸ್ಯನಾಗಿದ್ದೇ ಒಂದು ರೋಚಕ ಕಥೆ.

ನಾನು ಮತ್ತು ಅಣ್ಣ ಆಗ 4-8 ವಯಸ್ಸಿನವರು. ಒಂದು ದಿನ ಆಟ ಆಡಲು ಹೋದಾಗ ಗುಂಡು-ಗುಂಡಗೆ  ಮುದ್ದಾಗಿದ್ದ ಪುಟ್ಟ ನಾಯಿಮರಿ ಕಣ್ಣಿಗೆ ಬಿತ್ತು. ಆಹಾ ಅದೇನು ಸೌಂದರ್ಯ?!  ಮಿರುಗುವ ಕೆಂಚು ಮೈಬಣ್ಣ, ಹಣೆಯ ಮೇಲೆ ಬಿಳಿಯ ಚಂದ್ರ, ಕಾಲುಗಳಿಗೆ ಸಾಕ್ಸ್ ಹಾಕಿದಂತೆ ಬಿಳಿಯ ಬಣ್ಣ, ಬಾಲದ ತುದಿಗೆ ಮತ್ತೆ ಬಿಳಿಯ ಕುಚ್ಚು, ಮಿಂಚುವ ಕಣ್ಣು… ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ!! ಒಂದು ತಿಂಗಳೂ ಆಗಿರಲಿಕ್ಕಿಲ್ಲ ಅದರ ವಯಸ್ಸು ಆಗ. ದೇವರಾಣೆಗೂ ಇವತ್ತಿನವರೆಗೆ ಇಂಡಿಯನ್ ಬ್ರೀಡ್ ನಲ್ಲಿ ಅಷ್ಟು ಚಂದದ ನಾಯಿಮರಿಯನ್ನು ನಾನು ನೋಡಿಲ್ಲ. Love at first sight!!   ಆದರೇನು ಮಾಡೋದು? ಈಗಾಗಲೇ ಅದು ಇನ್ನೊಬ್ಬನ ವಶವಾಗಿತ್ತು. ಅಣ್ಣನಿಗಿಂತ ಒಂದೆರಡು ವರ್ಷಕ್ಕೆ ದೊಡ್ಡವನಾದ, ನಮ್ಮ ಮನೆಯ ಹತ್ತಿರದವನೇ ಆದ ಮಹಾಬಲೇಶ್ವರ. ಅವನಿಗೆ ಪೂಸಿ ಹೊಡೆದು ಬೇಡಿದೆವು. ಆತನಿಗೇನೂ ಅದನ್ನು ಸಾಕುವ ಉದ್ದೇಶವಾಗಲೀ, ಪ್ರೀತಿಯಾಗಲೀ ಬಹುಷಃ ಇರಲಿಲ್ಲ. ಹಾಗಾಗಿ ಸೀದಾ ವ್ಯವಹಾರಕ್ಕೆ ನಿಂತ. ಎಂಟಾಣೆ ಕೊಟ್ಟರೆ ನಾಯಿಮರಿ ನಿಮಗೆ ಎಂದು. ಅಮ್ಮನ ಬಳಿ ಕೇಳಿ ನಾಳೆ ದುಡ್ಡು ಕೊಡುವುದಾಗಿ ಹೇಳಿ ಮರಿಯೊಂದಿಗೆ ಕುಣಿಯುತ್ತ ಮನೆಗೆ ಬಂದೆವು. ಒಮ್ಮೆ ಬೈದಳಾದರೂ ಅಮ್ಮನಿಗೂ ಮರಿ ಇಷ್ಟವಾಯಿತು. ಆದರೆ ಅಮ್ಮ ನಾಲ್ಕಾಣೆಗಿಂತ ಒಂದು ಪೈಸ ಕೂಡ ಜಾಸ್ತಿ ಕೊಡಲು ಒಪ್ಪಲಿಲ್ಲ. ಮಾರನೇ ದಿನ ಮಹಾಬಲೇಶ್ವರನ ಬದಲು ಅವನ ಅಣ್ಣ ಶ್ರೀಕಾಂತಣ್ಣನಿಗೆ ನಾಲ್ಕಾಣೆ ಕೊಟ್ಟು ಅಲ್ಲಿಂದ ಕಾಲ್ಕಿತ್ತೆವು !! ವಿಷಯ ತಿಳಿದ ಮಹಾಬಲೇಶ್ವರ ಕೆಂಡಾಮಂಡಲವಾಗಿ  ಮನೆಗೆ ಬಂದ. “ಕೊಟ್ಟರೆ ಎಂಟಾಣೆ ಕೊಡಿ, ಇಲ್ಲದಿದ್ರೆ ನಾಯಿಮರಿ ವಾಪಸ್ ಮಾಡಿ” ಎಂದು ಆವಾಜ್ ಹಾಕಿದ. ಬೆತ್ತದ ಬುಟ್ಟಿಯೊಳಗೆ ನಾಯಿಮರಿಯನ್ನಿಟ್ಟು ಬಚ್ಚಲ ಮನೆಯಲ್ಲಿ ನಾವು ಬಚ್ಚಿಟ್ಟು ಕುಳಿತರೆ ಅಮ್ಮ “ಇಷ್ಟೇ ಕೊಡೋದು” ಅಂದು ಮಹಾಬಲೇಶ್ವರನನ್ನು ಸಂಭಾಳಿಸುತ್ತಿದ್ದಳು.. “ನಿಮ್ಮ ಅಮ್ಮನಿಗೆ ಹೇಳ್ತೀನಿ ನೋಡು” ಎಂದು ಹೆದರಿಸುತ್ತಿದ್ದಳು. ಮಣ್ಣಿನ ಗೋಡೆಗೆ ಸೋಗೆ ಹೊದಿಸಿದ ಮನೆಯ ಬಾಗಿಲ ಪಟ್ಟಿಗೆ ಎರಡೂ ಕೈಯಿಟ್ಟು ನಿಂತಿದ್ದ ಮಹಾಬಲೇಶ್ವರ ಸಿಟ್ಟಿನಿಂದ ಆ ನಾಲ್ಕಾಣೆಯನ್ನೂ ಮನೆಯೊಳಗೆ ರಿವ್ವನೇ ಎಸೆದು ಹೋದದ್ದು ಕಣ್ಣಿಗೆ ಕಟ್ಟಿದಂತೆ ನೆನಪಿದೆ ನನಗೆ !!

 

Bantaಹೀಗೆ  ಪುಕ್ಕಟೆಯಾಗಿ ಸಿಕ್ಕ ನಾಯಿಮರಿಗೆ ಬಂಟ ಎಂದು ನಾಮಕರಣ ಮಾಡಿದ್ದು ಸಾಹಿತ್ಯ ಜ್ಞಾನವುಳ್ಳ ಅಪ್ಪ!!  ಸರಿ, ಊಟ, ತಿಂಡಿ ಎಲ್ಲ ಬಂಟನ ಜೊತೆ. ನಿಂತರೆ – ಕೂತರೆ – ಎದ್ದರೆ – ಶಾಲೆಗೆ ಹೋಗುವ ಮೊದಲು – ಶಾಲೆಯಿಂದ ಬಂದ ತಕ್ಷಣ – ಹೀಗೆ ಸರ್ವಸಮಯಂ ಬಂಟಮಯಂ!!  “ಕೈಯಲ್ಲಿ ಎತ್ತಿಕೊಂಡು ಮುದ್ದು ಮಾಡುತ್ತಾ ಇದ್ದರೆ ಅವನು ತೆಳ್ಳಗಾಗಿ ಸತ್ತು ಹೋಗುತ್ತಾನೆ” ಎಂಬ ಅಮ್ಮನ ಬೆದರಿಕೆಯ ನಡುವೆಯೂ ಅವನಿಲ್ಲದೆ ನಾವಿಲ್ಲ ಎಂಬ ಪರಿಸ್ಥಿತಿ!! ನಮ್ಮ ಜಗತ್ತೇ ಬಂಟ.  ಬಂಟನಿಗೆ ನಾನು ಅಕ್ಕ, ಅಂತೆಯೇ ಅಣ್ಣ, ಅಪ್ಪ, ಅಮ್ಮ!  “ಅಪ್ಪ ಬಂದ ಮೇಲೆ ನಿನಗೆ ಊಟ” ಎಂದರೆ ಅಪ್ಪ ಬರುವುದನ್ನು ಕಾಯುತ್ತ ಗೇಟ್ ಕಡೆ ನೋಡುತ್ತ ಅಪ್ಪ ಬಂದ ಕೂಡಲೇ ಎದ್ದು ತನ್ನ ಊಟದ ಬಟ್ಟಲ ಬಳಿ ಓಡುವಷ್ಟು ಬುದ್ದಿವಂತ. “ಅಕ್ಕ ಎಲ್ಲಿದ್ದಾಳೆ?” ಎಂದರೆ ನನ್ನ ಬಳಿ ಬಂದು ನಿಂತು ಬಾಲ ಅಲ್ಲಾಡಿಸುವಷ್ಟು ತಿಳುವಳಿಕೆ. ಹೀಗೆ ನಮ್ಮೆಲ್ಲರ ನಿರೀಕ್ಷೆ ಮೀರಿದ ಬುದ್ದಿ ಪ್ರದರ್ಶಿಸುತ್ತ ನಮ್ಮನ್ನು ಆವರಿಸಿದ.

ಬಂಟ ಇನ್ನೂ ಚಿಕ್ಕವನಾಗಿದ್ದಾಗಿನ ಒಂದು ಘಟನೆ ಚೆನ್ನಾಗಿ ನೆನಪಿದೆ ನನಗೆ. ನನ್ನ ಅಜ್ಜ (ಅಮ್ಮನ ಅಪ್ಪ) ತೀರಿ ಹೋದರು. ಸಹಜವಾಗಿಯೇ ಹದಿನಾಲ್ಕು ದಿನ ಅಮ್ಮ ತವರುಮನೆಯಲ್ಲಿ ಇರಬೇಕಿತ್ತು. ನಾವೂ ಅಜ್ಜಿಮನೆಯಲ್ಲೇ ಠಿಕಾಣಿ. ಬಂಟನನ್ನು ಏನು ಮಾಡುವುದು? ಬೇರೆ ದಾರಿಯಿಲ್ಲದೇ ಅವನನ್ನೂ ಕರೆದೊಯ್ದೆವು. ಆದರೆ ಬೇರೆ ಯಾರು ಊಟ ಕೊಟ್ಟರೂ ಮುಟ್ಟದಿರುವಷ್ಟು possessiveness ಬೆಳೆಸಿಕೊಂಡಿದ್ದ ಬಂಟ ನಮಗೆ ಸವಾಲಾದ. ಅಪ್ಪಟ ವೈದಿಕರಾಗಿದ್ದ ಅಜ್ಜನ ಕ್ರಿಯಾಕರ್ಮಗಳು ಅಷ್ಟೇ ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದವು. ಅದರ ಅಂಗವಾಗಿ ಅಮ್ಮ ಮೂರು ಹೊತ್ತೂ ಮಡಿಯಲ್ಲಿರಬೇಕಿತ್ತು. ಆದರೆ ಬಂಟ ಬೇರೆಯವರು ಕೊಟ್ಟ ಹಾಲನ್ನೂ ಕುಡಿಯದೆ ಆಕಾಶ ನೋಡಿ ರೋಧಿಸುತ್ತ ಕುಳಿತ. ಹೊಟ್ಟೆಗಿಲ್ಲದೆ ಸತ್ತು ಹೋದರೆ ಎಂದು ನಾವು ಕಂಗಾಲು. ಅಮ್ಮನಿಗೆ ಉಭಯಸಂಕಟ. ಈ ಗಲಾಟೆಗೆ ಬೈದುಕೊಂಡ ನೆಂಟರು ಅದೆಷ್ಟೋ. ಕೂಗಿ ಕೂಗಿ ಗಂಟಲು ಬಿದ್ದು ಬಾಯಿ ತೆರೆಯುವುದು ಕಣ್ಣಿಗೆ ಕಾಣುತ್ತಿತ್ತೇ ಹೊರತು ಸ್ವರ ಹೊರಗೆ ಬರದಷ್ಟು ನಿತ್ರಾಣನಾದ. ಕೊನೆಗೆ ಅಮ್ಮನೇ ಸೋತಳು. ಪ್ರತಿದಿನ ಆತ ಕೂಗಿದಾಗೆಲ್ಲ ಹಾಲು ಅನ್ನ ಕೊಟ್ಟು ಪುನಃ ಸ್ನಾನ ಮಾಡಿ ಮಡಿಯಾಗುತ್ತಿದ್ದಳು!  ಪಾಪ, “ವೈದಿಕರ ಮನೆಗಳಲಿ ಊಟ ಹೊತ್ತಾಗುವುದೆಂದು ತಾವರೆಗೆರೆಯ ಜೋಯಿಸರ ಮೊಮ್ಮಗನನ್ನು ತಿರಸ್ಕರಿಸಿದ ಶಾನುಭೋಗರ ಮಗಳು ಸೀತಾದೇವಿ” ಗೆ [1] ಇದ್ದ ಸ್ವಾತಂತ್ರ್ಯ ನಮ್ಮ ಬಂಟನಿಗಿರಲಿಲ್ಲ!! ಆದರೂ ಆತ ತನ್ನ ಹಠವನ್ನೇ ಸಾಧಿಸಿದ್ದು ಸುಳ್ಳಲ್ಲ.

ಇಂಥ ಹಠ ಬಿಟ್ಟರೆ ನಮ್ಮ ಬಂಟ ತುಂಬ ಒಳ್ಳೆಯವ. ಹುಷಾರಿಲ್ಲದಾಗ ಕೈಚೀಲದೊಳಗೆ ತುಂಬಿಕೊಂಡು ಬಸ್ ನಲ್ಲಿ ಡಾಕ್ಟರ್ ಬಳಿ ಹೋದರೂ ಸುಮ್ಮನಿರುತ್ತಿದ್ದ. ಚೀಲದೊಳಗಿಂದ ತಲೆ ಹೊರ ಹಾಕಿ ಆಚೆ-ಈಚೆ ನೋಡುತ್ತ ತಾನೆಷ್ಟು ಕುತೂಹಲಿ ಮತ್ತು ಅಷ್ಟೇ ಸಂಭಾವಿತ ಎಂದು ಸಾಬೀತುಪಡಿಸುತ್ತಿದ್ದ. ಆಲೆಮನೆಯ ಸೀಸನ್ನಲ್ಲಿ ಎಲ್ಲಿಂದಲೋ ಅಪ್ಪ ತರುವ ಕಬ್ಬಿನ ಹಾಲಿಗೆ ಕಾಯುತ್ತಿದ್ದ. ನಮ್ಮ ಮನೆಯಿಂದ ಐದು ಮೈಲು ದೂರವಿದ್ದ ಅಜ್ಜಿ ಮನೆಗೆ ಅಪ್ಪ ಆಲೆಮನೆ ಎಂದು ಹೋಗುವಾಗ ಸೈಕಲ್ ಗೆ ಬಂಟನ ಚೈನ್ ಕಟ್ಟಿಕೊಂಡು ಹೋದದ್ದಿದೆ. ಅಪ್ಪನ ಸೈಕಲ್ ವೇಗಕ್ಕೆ ಸರಿಯಾಗಿ ತಾನೂ ಓಡುತ್ತ, ರಸ್ತೆಯ ಅಂಕು-ಡೊಂಕು, ಉಬ್ಬು – ತಗ್ಗು ಗಳಿಗೆ ಸರಿಯಾಗಿ ತನ್ನ ವೇಗವನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತ ಒಮ್ಮೆ ಕೂಡ ಬೀಳದೆ, ಸೈಕಲ್ ಗಿಂತ ಮುಂದೂ ಹೋಗದೆ ಕರೆಕ್ಟ್ ಆಗಿ ಓಡುತ್ತಿದ್ದ ಬಂಟ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ. ಈಗ ಒಮ್ಮೊಮ್ಮೆ ಯೋಚಿಸುತ್ತೇನೆ, ಬಂಟನಿಗೆ ಅಷ್ಟು ಚೆನ್ನಾಗಿ ಫಿಸಿಕ್ಸ್ ಬರುತ್ತಿತ್ತೇ ಎಂದು!  ಇಲ್ಲದಿದ್ದರೆ ಅದು ಹೇಗೆ ಆತ velocity, acceleration ಎಲ್ಲ ತಿಳಿದುಕೊಂಡು apply ಮಾಡುತ್ತಿದ್ದ?  ಇಂಥ ಎಲ್ಲ quality ಗಳಿಂದಾಗಿ ಆತ ನಮ್ಮ ಮನೆಗೆ ಬರುತ್ತಿದ್ದ ಎಲ್ಲ ನೆಂಟರಿಗೂ ಪ್ರೀತಿಪಾತ್ರನಾದ. ಅವನಿಗಾಗಿಯೇ ಕೆಲವರು ತಿಂಡಿ ತರುತ್ತಿದ್ದರು. ಹೀಗೆ ನಮ್ಮೆಲ್ಲರ ಅಚ್ಚು ಮೆಚ್ಚಿನ ತಮ್ಮನಾಗಿ, ಮನೆಯ ಮಗನಾಗಿ ಹಾಯಾಗಿದ್ದ. ನಮ್ಮ ಜೀವನದ ಭಾಗವೇ ಆಗಿದ್ದ.

ಯಾರಿಗೂ ಉಪದ್ರ ಕೊಡದ ಸ್ನೇಹಜೀವಿಯಾಗಿದ್ದ ಅವನಿಗೆ ನಮ್ಮ ನೆರೆಯ ಒಬ್ಬರನ್ನು ಕಂಡರೆ ಮಾತ್ರ ಯಾಕೋ ಆಗುತ್ತಿರಲಿಲ್ಲ. ಅವರ ಹೆಸರು ಸುಬ್ರಾಯ ನಾಯ್ಕ ಎಂದು ನೆನಪು. ಅವರು ಸೈಕಲ್ ನಲ್ಲಿ ಹೋಗುವಾಗೆಲ್ಲ ಬೊಗಳುತ್ತ ಅಟ್ಟಿಸಿಕೊಂಡು ಹೋಗುತ್ತಿದ್ದ. ಅವರಿಗೂ ಅಷ್ಟೇ – ಬಂಟನನ್ನು ಕಂಡರಾಗುತ್ತಿರಲಿಲ್ಲ. ನಮ್ಮ ಯಾವ ಬೆದರಿಕೆಗೂ ಜಗ್ಗದೇ ತನ್ನ ಚಾಳಿ ಮುಂದುವರೆಸುತ್ತಿದ್ದ ಬಂಟ. ಆದರೆ ಈ ವೈರತ್ವವೇ ಅವನ ಸಾವಿಗೆ ಕಾರಣವಾಗಿದ್ದೊಂದು ದುರಂತ. ಈತ ಅಟ್ಟಿಸಿಕೊಂಡು ಬರುತ್ತಾನೆಂದು ಒಂದು ಕತ್ತಿ ಹಿಡಿದುಕೊಂಡೇ ಸೈಕಲ್ ಓಡಿಸುತ್ತಿದ್ದ ಸುಬ್ರಾಯ ನಾಯ್ಕರಿಗೆ ನಾವು ‘ ಕತ್ತಿ ನಾಯ್ಕ’ ಎಂದೇ ಹೆಸರಿಟ್ಟೆವು. ಅಮ್ಮ ಅವರಿಗೆ ಬಂಟನ ಒಳ್ಳೆಯತನ ಎಲ್ಲ ವಿವರಿಸಿ ಅರ್ಥವಾಗದ ಆತನ ಈ behavior ಬಗ್ಗೆ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಳು. ಆದರೆ ಕೋಪವೇ ಮೈ ಎತ್ತಿದಂತಿದ್ದ ಕತ್ತಿ ನಾಯ್ಕ ಅಟ್ಟಿಸಿಕೊಂಡು ಬರುತ್ತಿದ್ದ ಬಂಟನಿಗೆ ಕತ್ತಿ ಬೀಸುತ್ತಿದ್ದರು.  ಸಾಕಷ್ಟು ಬಾರಿ ಅವರ ಗುರಿ ತಪ್ಪಿಸಿಕೊಂಡಿದ್ದ ಬಂಟ ಒಮ್ಮೆ ಸೋತುಬಿಟ್ಟ. ಅವರು ಎಸೆದ ಕತ್ತಿ ಅವನ ಕಾಲನ್ನು ಕತ್ತರಿಸಿತು. ಅದೇ ನೆಪವಾಗಿ, ಕಾಲು ವ್ರಣವಾಗಿ ಯಾವ ಚಿಕಿತ್ಸೆಗೂ ಬಗ್ಗದೇ ಕೇವಲ 4-5 ವರ್ಷಗಳ ವಯಸ್ಸಿಗೇ ಆತ ನಮ್ಮನ್ನಗಲಿದ.

ಭೌತಿಕವಾಗಿ ಬಂಟ ದೂರವಾಗಿ 25 – 28 ವರ್ಷಗಳೇ ಆದರೂ ಅವನ ನೆನಪು ಮಾಸಿಲ್ಲ. ಅವನು ತೀರಿ ಹೋದ ಮೇಲೆ ಬೇರೆ ನಾಯಿಮರಿ ಸಾಕುವ ಯತ್ನ ಮಾಡಲೇ ಇಲ್ಲ. ಈಗ ಈ ಬೆಂಗಳೂರಿನ ಅಪಾರ್ಟಮೆಂಟ್ ಜೀವನದಲ್ಲಿ ನಾಯಿಮರಿಗೆ ಜಾಗವೆಲ್ಲಿ? ಬೆಳಿಗ್ಗೆ ಹೊತ್ತು ಮೂಡುವ ಮೊದಲು ಮನೆ ಬೀಗ ಹಾಕಿ ಆಫೀಸ್ ಗೆ ಓಡಿ ಚಂದ್ರ ನೆತ್ತಿಗೇರಿದ ಮೇಲೆ ಮನೆ ತಲುಪುವ ಧಾವಂತದ ಬದುಕಿನಲ್ಲಿ ನಾಯಿಮರಿ ಬೇರೆ ತಂದು ಅದಕ್ಕೆ ಒಂಟಿತನದ ಡಿಪ್ರೆಶನ್ ಮೂಡಿಸುವ ಪಾಪ ಯಾಕೆ ಬೇಕು?

ಸದಾ ಬಂಟನ ಗುಣ – ಸೌಂದರ್ಯ – ಆಟೋಟಗಳನ್ನು ಧ್ಯಾನಿಸುವ ನನಗೆ ಇತ್ತೀಚಿಗೆ ನನ್ನ ಗಂಡ ಬಂಟನನ್ನು ಸ್ವಲ್ಪ ಮಟ್ಟಿಗೆ  ಹೋಲುವ ನಾಯಿಮರಿ ಬೊಂಬೆಯನ್ನು ತಂದು ಕೊಟ್ಟರು… ಅದೂ anniversary ಗಿಫ್ಟ್ ಆಗಿ!!  ಹೀಗಾಗಿ ಬಂಟ ಮತ್ತಷ್ಟು ನೆನಪಾದ. ಜೊತೆಗೆ ಬಾಕಿ ಉಳಿದಿರುವ ಮಹಾಬಲೇಶ್ವರನ ಎಂಟಾಣೆಯ ಋಣವೂ!!

(ವಿ. ಸೂ. : ಮೊದಲೇ ಹೇಳಿದಂತೆ ಬಂಟನಷ್ಟು ಚಂದದ ಇಂಡಿಯನ್ ಬ್ರೀಡ್ ನಾನೆಲ್ಲೂ ನೋಡಿಲ್ಲ. ಆದರೂ ಇಂಟರ್ನೆಟ್ ಜಾಲಾಡಿ ಕೊಂಚ ಹೋಲಿಕೆ ಇರುವ ನಾಯಿಮರಿ ಫೋಟೋ ಹಾಕಿದ್ದೇನೆ.)

[1] ಬಂಟನ attitude ಅನ್ನು ಶಾನುಭೋಗರ ಮಗಳಿಗೆ ಹೊಲಿಸಿದ್ದಕ್ಕೆ ಪ್ರೇಮಕವಿ ದಿ. ಕೆ. ಎಸ್. ನರಸಿಂಹಸ್ವಾಮಿಯವರ ಕ್ಷಮೆ ಕೋರುತ್ತ.

Edited version of this article is published in a Kannada Daily Vishwavani on 1st January 2017.

http://epaper.vishwavani.news/bng/e/bng/01-01-2017/19

 

This entry was posted in ಭಾವಲೋಕ...!!!. Bookmark the permalink.

8 Responses to ಬಂಟ

  1. prasanna says:

    mam, very nice article..!!!

  2. Prafful V H says:

    don’t know the exact reason..but we get attached to pets especially puppies so soon that in some days with them, they become part of our family.. the memory of them indeed is a beautiful one!! reading this post just took me back to the time when i was reading one of the short stories written by our “Masti venkatesha Iyengar” . the pattern of your writing is very good mam :) a post which has a memory, a story , and to add to that The “Sahitya” in a better way. thank you for sharing such a nice memory and a post mam :)

    • ChetanaHegde says:

      Thanks Prafful :) Yes, pets are like that.
      Loooooong back, I used to write to news papers/magazines as well. But, now started writing here!! No ‘Sahitya’ and all, but just sharing few things.. Just a way to be away from technical world 😉 Hence, created a separate category (Bhavaloka) in this website.

  3. Jayashree A Naik says:

    Nice article Chethana, – Jayashree A Naik, Your school friend

  4. Samartha M S says:

    Childhood in village will be spent with some cute friend like your “Banta”. After facing all opposition from parents journey starts with a small pet, those are the wonderful moments spent in life. The actual problems starts when they grow big, cute dog will start to look as a villain. The value of every creatures is not known until we loses opportunity of being with them. Nice article which remembers childhood of every person who has played with cute friends like “Banta”.

Leave a Reply to prasanna Cancel reply

Your email address will not be published. Required fields are marked *